ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಿಂದು ನಡೆದ ಹಿಂಸಾಚಾರ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯ ಗುಂಬಜ್ ಏರಿದ್ದ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
ಐತಿಹಾಸಿಕ ಸ್ಮಾರಕದಲ್ಲಿ ಪ್ರತಿಭಟನಾಕಾರರನ್ನು ಪ್ರಚೋದಿಸುವ ಉದ್ದೇಶದಿಂದ ಕತ್ತಿಗಳನ್ನು ತಿರುಗಿಸಿದ ಆರೋಪದ ಮೇಲೆ ಕಳೆದ ಮಂಗಳವಾರ ಬಂಧಿಸಲ್ಪಟ್ಟ ಮನಿಂದರ್ ಸಿಂಗ್ ಸಹಚರರಲ್ಲಿ ಒಬ್ಬರಾದ ಜಸ್ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ವಾಯುವ್ಯ ದೆಹಲಿಯ ಸ್ವರೂಪ್ ನಗರದ ನಿವಾಸಿಯಾದ ಜಸ್ಪ್ರೀತ್ ಸಿಂಗ್ ನನ್ನು ಅಪರಾಧ ವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮನಿಂದರ್ ಸಿಂಗ್ ನ ಸಹಚರಲ್ಲಿ ಜಸ್ಪ್ರೀತ್ ಸಿಂಗ್ ಒಬ್ಬರಾಗಿದ್ದು, ವಿಡಿಯೋಗಳಿಂದ ಆತನನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ಸಹಸ್ರಾರು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿತ್ತು. ಅನೇಕ ಪ್ರತಿಭಟನಾಕಾರರು ಕೆಂಪು ಕೋಟೆಯವರೆಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ್ದರು, ಕೆಲವರು ಕೆಂಪುಕೋಟೆ ಬಳಿ ಪ್ರತ್ಯೇಕ ಧರ್ಮವೊಂದರ ಧ್ವಜ ರೋಹಣ ಮಾಡಿದ್ದರು.