ನವದೆಹಲಿ: ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ. ಖ್ಯಾತ ವಿಜ್ಞಾನಿ ಡಾ ಸಿ ವಿ ರಾಮನ್ ಕಂಡುಹಿಡಿದ ರಾಮನ್ ಎಫೆಕ್ಟ್ ಗೆ ಮೀಸಲಿಟ್ಟ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನ ಯುವಜನತೆ ಭಾರತದ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಓದಿ ಅಧ್ಯಯನ ಮಾಡಿ ಭಾರತದ ವಿಜ್ಞಾನದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ತಿಂಗಳ ಕೊನೆಯ ಭಾನುವಾರದ ಆಕಾಶವಾಣಿಯ ಮನದ ಮಾತು ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮನಿರ್ಭರ ಭಾರತಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ ಅನನ್ಯವಾದುದು. ಪ್ರಯೋಗಾಲಯವನ್ನು ಭೂಮಿಗೆ ತರುವ 'ಲ್ಯಾಬ್ ಟು ಲ್ಯಾಂಡ್' ಮಂತ್ರದೊಂದಿಗೆ ವಿಜ್ಞಾನವನ್ನು ಮುನ್ನಡೆಸಬೇಕು. ಲಡಾಕ್‌ನ ಉರ್ಗೆನ್ ಫುಂಟ್‌ಸಾಗ್ 20 ವಿಭಿನ್ನ ಬೆಳೆಗಳನ್ನು ಸಾವಯವವಾಗಿ ಆವರ್ತಕ ಮಾದರಿಯಲ್ಲಿ ಬೆಳೆಯಲು ನಾವೀನ್ಯತೆ ತಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವಿಜ್ಞಾನದ ಕೊಡುಗೆಯ ಉದಾಹರಣೆ ಕೊಟ್ಟರು.
ನೀರಿನ ರಕ್ಷಣೆಗೆ ಕೇಂದ್ರದಿಂದ ಅಭಿಯಾನ : ಬೇಸಿಗೆ ಕಾಲ ಬರುತ್ತಿದೆ. ಈ ಸಮಯದಲ್ಲಿ ನೀರಿನ ಸಂರಕ್ಷಣೆ ಮಹತ್ವವನ್ನು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಜನತೆಗೆ ಸಾರಿದ್ದಾರೆ. ಮಾಘ ಮಾಸದಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ. ಮಾರ್ಚ್ 22 ವಿಶ್ವ ಜಲ ದಿನ, ನೀರಿನ ಸಂರಕ್ಷಣೆ ಬಗ್ಗೆ ನಮ್ಮ ಜವಬ್ದಾರಿಗಳನ್ನು ಅರಿತುಕೊಳ್ಳಬೇಕು. ಇನ್ನು ಕೆಲವೇ ದಿನಗಳಲ್ಲಿ ಜಲಶಕ್ತಿ ಸಚಿವಾಲಯ 'ಮಳೆ ನೀರನ್ನು ಹಿಡಿದುಕೊಳ್ಳೋಣ' ಎಂಬ 100 ದಿನಗಳ ಅಭಿಯಾನವನ್ನು ಆರಂಭಿಸಲಿದೆ. ಮಳೆ ನೀರು ಬೀಳುವಲ್ಲಿ, ಯಾವಾಗ ಸುರಿಯುತ್ತದೋ ಆಗ ಹಿಡಿದಿಟ್ಟುಕೊಳ್ಳಿ ಎಂಬುದು ಅಭಿಯಾನದ ಘೋಷವಾಕ್ಯವಾಗಿದೆ ಎಂದರು.
ಇತ್ತೀಚಿನ ಅಂಕಿಅಂಶ ಪ್ರಕಾರ, ದೇಶದ ಪ್ರಮುಖ ಕಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 112 ಪಕ್ಷಿಗಳ ಪ್ರಬೇಧಗಳು ಸಿಕ್ಕಿವೆ. ಇಷ್ಟೊಂದು ಪ್ರಬೇಧದ ಹಕ್ಕಿಗಳು ಸಿಗಲು ಕಾರಣ ನೀರಿನ ಸಂರಕ್ಷಣೆ ಮತ್ತು ಪರಿಸರ, ಹಕ್ಕಿಗಳ ಉದ್ಯಾನವನದಲ್ಲಿ ಮಾನವನ ಸಂಘರ್ಷ ಕಡಿಮೆಯಾಗಿರುವುದು ಎಂದರು.