HEALTH TIPS

ವೀರಮಲೆ ಅಭಿವೃದ್ಧಿ ಯಾವಾಗ!?

              ಕಾಸರಗೋಡು:  ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಕನಸಿನ ಯೋಜನೆ ಎಂದು ವಿಶ್ಲೇಷಿಸಲಾದ ಚೆರ್ವತ್ತೂರು ವೀರಮಲೆ ಬೆಟ್ಟದ ಪ್ರವಾಸೋದ್ಯಮ ಯೋಜನೆಯು ಹಲವು ವರ್ಷಗಳಿಂದ ಕಡತದಲ್ಲೇ ಬಾಕಿ ಉಳಿದಿದೆ. 

     ವೀರಮಲೆ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಕಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಯೋಜನೆಗೆ ತಾಂತ್ರಿಕ ಅಡಚಣೆಗೆ ಒಳಗಾಗಿದೆ.

          ಡಚ್ಚರ ತಾಣವಾಗಿ ಚರಿತ್ರೆಯಲ್ಲಿ ದಾಖಲಾದ ಬೆಟ್ಟವನ್ನು ಡಚ್ಚರು ವೀರಮಲೆ ಎಂದು ಹೆಸರಿಸಿದ್ದರು. ಆದುದ ರಿಂದಲೇ ಚರಿತ್ರೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ವೀರಮಲೆಯಲ್ಲಿ ಜಿಲ್ಲೆಯ ಬೃಹತ್ ಚರಿತ್ರೆಯನ್ನು ನೆನಪಿಸುವ ಯೋಜನೆಗಳನ್ನೊಳಗೊಂಡಿರುವ ಪ್ರವಾಸೋದ್ಯಮ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. 200 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷಿಸುವ ಈ ಯೋಜನೆಯನ್ನು ಜಾರಿಗೊಳಿಸಲು ಅಗತ್ಯವಿರುವ ಎಲ್ಲಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಆದರೆ ತಾಂತ್ರಿಕ ಅಡಚಣೆಗಳಿಗೊಗಾಗಿ ಯೋಜನೆ ಕಡತದಲ್ಲೇ ಉಳಿಯುವಂತಾಯಿತು. 

            ಘೋಷಿತ ಯೋಜನೆ: 

   ವೀರಮಲೆಯಲ್ಲಿ ಪ್ರಧಾನವಾಗಿ ಬಹು ಭಾಷಾ ಭೂಮಿಯಾದ ಕಾಸರಗೋಡಿನ ಪರಂಪರೆಯನ್ನು ಹೇಳುವ ಕಲಾ ಗ್ರಾಮವಾಗಿ ಅಭಿವೃದ್ದಿಪಡಿಸಲು ಯೋಚಿಸಲಾಗಿದೆ. ಇದಲ್ಲದೆ ಬೆಟ್ಟದ ಕೆಳ ಭಾಗದಲ್ಲಿರುವ ತೇಜಸ್ವಿನಿ ಹೊಳೆಯಲ್ಲಿ ರೋಪ್ ವೇ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಮಕ್ಕಳ ಉದ್ಯಾನ, ಕಾಫಿ ಹೌಸ್‍ಗಳು, ಸೂರ್ಯಾಸ್ತಮಾನ ವೀಕ್ಷಿಸುವ ವ್ಯೂ ಪಾಯಿಂಟ್‍ಗಳನ್ನು ನಿರ್ಮಿಸಲು ಯೋಜನೆ ಇರಿಸಲಾಗಿತ್ತು. ವರ್ಷಗಳ ಹಿಂದೆಯೇ ವೀರಮಲೆಯ ಪ್ರವಾಸೋದ್ಯಮ ಯೋಜನೆಗಳನ್ನು ತಯಾರಿಸುವ ಕ್ರಮ ಆರಂಭಿಸಲಾಗಿತ್ತು. ಯೋಜನೆ ಘೋಷಿಸಿದಂದಿನಿಂದ ಇದುವರೆಗೆ ನಾಲ್ವರು ಸಚಿವರು ಯೋಜನಾ ಪ್ರದೇಶವನ್ನು ವೀಕ್ಷಿಸಲು ವೀರಮಲೆಗೆ ಆಗಮಿಸಿದ್ದರು.

           ಅಡಚಣೆಗಳು ಯಾವುದು?:

    ವೀರಮಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಜಾಗದ ಕೊರತೆ ಪ್ರಧಾನ ಅಡಚಣೆಯಾಗಿದೆ. 97 ಎಕರೆಯಷ್ಟು ವಿಸ್ತೀರ್ಣವಿರುವ ವೀರಮಲೆಯ ಮೇಲ್ಭಾಗದಲ್ಲಿ ಪ್ರವಾಸೋದ್ಯಮ ಯೋಜನೆಯನ್ನು ವ್ಯವಸ್ಥೆಗೊಳಿಸಬೇಕಾಗಿದೆ. ಇದರ ವಿಸ್ತೀರ್ಣ 37 ಎಕರೆ ಆಗಿದೆ. ಇದರಲ್ಲಿ 15 ಎಕರೆ ಜಾಗ ಕಂದಾಯ ಇಲಾಖೆಯದ್ದು ಹಾಗೂ ಉಳಿದ ಸ್ಥಳ ಅರಣ್ಯ ಇಲಾಖೆಯದ್ದಾಗಿದೆ. ಯೋಜನೆಯನ್ನು ಜಾರಿಗೊಳಿಸಬೇಕಾದರೆ ಪ್ರವಾಸೋದ್ಯಮ ಇಲಾಖೆಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಭೂಮಿ ಬಿಟ್ಟುಕೊಡಬೇಕಾಗಿದೆ.

           ಅರಣ್ಯ ಇಲಾಖೆಯ ಅಧೀನದ ಭೂಮಿಯಲ್ಲಿನಿರ್ಮಾಣ ಕಾಮಗಾರಿ ನಡೆಸಲು ಅನುಮತಿ ನೀಡಲಾಗದು ಎಂದು ಇಲಾಖೆ ಹೇಳಿರುವುದರಿಂದ ಕಂದಾಯ ಇಲಾಖೆ ಅಧೀನದಲ್ಲಿರುವ 15 ಎಕರೆ ಭೂಮಿಯಲ್ಲಿ ಪ್ರವಾಸೋದ್ಯಮ ಯೋಜನೆ ಅನುಷ್ಠಾನಗೊಳಿಸಲು ಅಗತ್ಯವಿರುವ ಕ್ರಮಗಳೊಂದಿಗೆ ಪ್ರವಾಸೋದ್ಯಮ ಅಧಿಕಾರಿಗಳು ಮುಂದೆ ಬಂದಿದ್ದರೂ, ಕಂದಾಯ ಇಲಾಖೆ ಭೂಮಿ ಲಭ್ಯಗೊಳಿಸಲು ಇದುವರೆಗೆ ಸಾಧ್ಯವಾಗಿಲ್ಲ. ತೃಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ನೇತೃತ್ವದಲ್ಲಿ ಭೂಮಿ ಲಭ್ಯಗೊಳಿಸುವ ಕ್ರಮಕ್ಕಾಗಿ ಸಚಿವರ ಮಟ್ಟದವರೆಗೆ ಚರ್ಚೆ ನಡೆದಿದ್ದರೂ ಭೂಮಿ ಬಿಟ್ಟುಕೊಡಲು ತಾಂತ್ರಿಕ ಅಡಚಣೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

     ಇಕೋ ಟೂರಿಸಂ ಯೋಜನೆ: ವೀರಮಲೆಯ ಅರಣ್ಯ ಇಲಾಖೆ ಅಧೀನದಲ್ಲಿರುವ 37 ಎಕರೆಯಷ್ಟು ಭೂಮಿಯಲ್ಲಿ ಇಕೋ ಟೂರಿಸಂ ಯೋಜನೆ ರೂಪಿಸುವ ಉದ್ದೇಶದೊಂದಿಗೆ ಅರಣ್ಯ ಇಲಾಖೆ ಹೆಜ್ಜೆ ಇರಿಸುತ್ತಿದೆ. ತೆನ್ಮಾಲದಲ್ಲಿ ಜಾರಿಗೊಳಿಸಿದ ಇಕೋ ಟೂರಿಸಂ ಯೋಜನೆ ಮಾದರಿಯಲ್ಲಿ ಇಲ್ಲಿ ಯೋಜನೆ ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ. ಯೋಜನೆಗೆ ಅಗತ್ಯವಿರುವ ರೂಪುರೇಷೆಯನ್ನು ಈಗಾಗಲೇ ತಯಾರಿಸಲಾಗಿದೆ.

          ಮಣ್ಣುಗಾರಿಕೆ ಸಮಸ್ಯೆ:

   ವೀರಮಲೆಯ ಕೆಳ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಣ್ಣುಗಾರಿಕೆ ನಡೆಸಿರುವುದರಿಂದ ಬೆಟ್ಟದ ಹಲವು ಭಾಗಗಳು ನಾಶದಂಚಿನಲ್ಲಿವೆ. ನಿಯಮಗಳು ಬರುವ ಮುನ್ನವೇ ವೀರಮಲೆಯಲ್ಲಿ ಕೆಂಪು ಕಲ್ಲುಗಣಿಗಾರಿಕೆ ಕಾಮಗಾರಿ ನಡೆದಿತ್ತು. ಇವೆಲ್ಲವೂ ಬೆಟ್ಟದ ನಾಶಕ್ಕೆ ದಾರಿಯಾಗುತ್ತಿದೆ. ಈಗ ಬೆಟ್ಟದ ಹಲವೆಡೆಗಳಲ್ಲಿ ಮಣ್ಣುಗಾರಿಕೆ ನಡೆಸುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ.

        ಕಾಡು ನುಂಗಿದ ಚೆರ್ವತ್ತೂರು  ಕೋಟೆ: ವೀರಮಲೆಗೆ ಇತಿಹಾಸದಲ್ಲಿ ಸ್ಥಾನ ನೀಡಿದ ಕೋಟೆ ಎಂಬುದಾಗಿ ಡಚ್ ದಾಖಲೆಗಳಲ್ಲಿ ಕೂಡ ವಿಮರ್ಶೆಗೊಳಗಾದ ಚೆರ್ವತ್ತೂರು ಕೋಟೆ. ದಕ್ಷಿಣ ಮಲೆನಾಡಿನಿಂದ ಸುಗಂಧ ದ್ರವ್ಯಗಳನ್ನು ಸಂಗ್ರಹಿಸಲು ವೀರಮಲೆಯಲ್ಲಿ ಕೋಟೆ ನಿರ್ಮಿಸಿ ಠಿಕಾಣಿ ಹೂಡಿದ ಡಚ್ಚರು ವೀರ್‍ಮಲೈ ಎಂಬ ಹೆಸರನ್ನು ಈ ಬೆಟ್ಟಕ್ಕೆ ಇಟ್ಟಿದ್ದರು. ಡಚ್ಚರ ತಾಣವಾಗಿ ಮಾರ್ಪಾಡುಗೊಂಡಿದ್ದ ಕೋಟೆಯು ಚೆರ್ವತ್ತೂರು ಕೋಟೆ ಎಂದು ಹೆಸರುವಾಸಿಯಾಯಿತು. ಆದರೆ ಯಾರೂ ಸಂರಕ್ಷಿಸದೆ ಎಲ್ಲವೂ ಹಾನಿಗೀಡಾದ ಕೋಟೆಯ ಅವಶೇಷಗಳು ಈಗ ಕಾಡುಬಳ್ಳಿಗಳಿಂದ ಆವರಿಸಿಕೊಂಡಿವೆ. 

          ವಲಸೆ ಹಕ್ಕಿಗಳ ಆವಾಸ ಸ್ಥಾನ: ವೀರಮಲೆಯ ಬೆಟ್ಟದ ಕೆಳಗಿರುವ ರಾಮನ್ ಚಿರ ಜಲಾಶಯ ವಲಸೆ ಹಕ್ಕಿಗಳ ಆವಾಸ ಸ್ಥಾನವಾಗಿದೆ. ವೀರಮಲೆಯ ಪ್ರವಾಸೋದ್ಯಮ ಯೋಜನೆಯನ್ನು ರಾಮನ್ ಚಿರ ಜಲಾಶಯವನ್ನು ಸೇರಿಸಿ ಜಾರಿಗೊಳಿಸಲಾಗುತ್ತಿದೆ. ಆದರೆ ಯೋಜನೆಗಳೆಲ್ಲ ಕಡತದಲ್ಲೇ ಉಳಿದಿರುವುದರಿಂದ ರಾಮನ್ ಚಿರ ಜಲಾಶಯ ಕೂಡ ನಾಶದಂಚಿನಲ್ಲಿದೆ.

           ಏನೆಲ್ಲ ವೀಕ್ಷಿಸಬಹುದು?:

      ವೀರಮಲೆ ಸಮುದ್ರ ತಳಮಟ್ಟದಿಂದ ಹೆಚ್ಚು ಎತ್ತರದಲ್ಲಿ ನಿಂತಿರುವುದರಿಂದ ಸಮುದ್ರದ ಮೂಲಕ ಸಂಚರಿಸುವ ಮೀನುಗಾರಿಕೆ ಬೋಟ್ ಮೊದಲಾದುವುಗಳನ್ನು ಕಾಣಲು ಸಾಧ್ಯ. ಸೂರ್ಯಾಸ್ತಮಾನದ ಮನೋಹರವಾದ ನೋಟ ಇಲ್ಲಿನ ಪ್ರಧಾನ ವಿಶೇಷತೆಯಾಗಿದೆ. ಬೆಟ್ಟದ ಕೆಳ ಭಾಗದಲ್ಲಿರುವ ರಾಮನ್ ಚಿರ ಜಲಾಶಯದ ಬದಿಗಳಲ್ಲಿರುವ ಕಾಂಡ್ಲಾ ಕಾಡುಗಳಿಗೆ ಬರುವ ವಲಸೆ ಹಕ್ಕಿಗಳು ಇನ್ನೊಂದು ವಿಶೇಷತೆಯಾಗಿದೆ. ಡಚ್ಚರ ಕೋಟೆಯ ಅವಶೇಷಗಳನ್ನು ಈಗಲೂ ಇಲ್ಲಿ ನೋಡಬಹುದಾಗಿದೆ. ಈ ಕೋಟೆಯಿಂದ ತೇಜಸ್ವಿನಿ ಹೊಳೆಯ ನೋಟ ರಮಣೀಯವಾಗಿದೆ.

        ಮೀನಿನ ರುಚಿ ಸವಿಯಬಹುದು: 

    ವೈವಿಧ್ಯವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ವೀರಮಲೆಗೆ ತಲುಪುವವರಿಗೆ ಹೊಳೆ ಮೀನಿನ ರುಚಿ ಸ್ವಾದದೊಂದಿಗೆ ಆಸ್ವಾದಿಸಬಹುದಾಗಿದೆ. ವೀರಮಲೆಯ ಅಡಿಭಾಗದಲ್ಲಿರುವ ಮಯಿಚ್ಚ ಗ್ರಾಮದಲ್ಲಿ ಹೊಳೆ ಮೀನಿನ ಖಾದ್ಯಗಳು ಕನಿಷ್ಠ ಬೆಲೆಗೆ ಲಭ್ಯ ಇವೆ. ಇಲ್ಲಿನ ನಾಲ್ಕು ಗ್ರಾಮೀಣ ಹೋಟೆಲ್ ಗಳು ಮೀನು ರುಚಿಗೆ ಹೆಸರುವಾಸಿಯಾಗಿವೆ.

          ಹೋಗುವುದು ಹೇಗೆ?:

     ಕಾಸರಗೋಡು ಭಾಗದಿಂದ ವೀರಮಲೆ ಕಾಣಲು ತಲುಪುವವರಿಗೆ ಚೆರ್ವತ್ತೂರು ಚೆಕ್‍ಪೋಸ್ಟ್ ಸಮೀಪದಿಂದ ರಾಮನ್ ಚಿರಕ್ಕಿರುವ ರಸ್ತೆಯ ಮೂಲಕ ವೀರಮಲೆಗೆ ತಲುಪಬಹುದಾಗಿದೆ. ಪಯ್ಯನ್ನೂರು ಭಾಗದಿಂದ ಬರುವವರು ಚೆರ್ವತ್ತೂರು ಬಸ್ ನಿಲ್ದಾಣದಲ್ಲಿ ಇಳಿದರೆ 75 ರೂ. ಬಾಡಿಗೆ ನೀಡಿದರೆ ಆಟೋ ಮೂಲಕ ವೀರಮಲೆಗೆ ತಲುಪಬಹುದಾಗಿದೆ. ಬಸ್‍ನಲ್ಲಿ ಬರುವವರು ಚೆರ್ವತ್ತೂರು ಚೆಕ್‍ಪೋಸ್ಟ್‍ನಲ್ಲಿ ಇಳಿದರೆ ಬೆಟ್ಟಕ್ಕೆ ನಡೆದು ಹತ್ತಬಹುದಾಗಿದೆ.


                  ಅಭಿಮತ: 

    ವೀರಮಲೆಯ ಅಭಿವೃದ್ದಿಗೆ ಈಗಾಗಲೇ ಹಲವು ಬಾರಿ ಪ್ರಯತ್ನಿಸಲಾಗಿದೆ. ಸರ್ಕಾರಕ್ಕೆ ಮೂರು ಬಾರಿ ಬೃಹತ್ ಮಟ್ಟದ ಸಮಗ್ರ ವರದಿ ನೀಡಿದ್ದರ ತರುವಾಯ ಕೆಲವು ವರ್ಷಗಳ ಹಿಂದೆ ಅನುಮೋದನೆ ಲಭ್ಯವಾಗಿದ್ದರೂ, ಜಾಗದ ಸಮಸ್ಯೆಯಿಂದ ಅನುಷ್ಠಾನ ಸಾಧ್ಯವಾಗಿಲ್ಲ. ಮುಖ್ಯವಾಗಿ ಅರಣ್ಯ ಇಲಾಖೆ ಆರಂಭದಲ್ಲಿ ಈ ಬಗ್ಗೆ ಭೂಮಿ ನೀಡಲು ನಿರಾಕರಿಸಿತ್ತು. ಇದೀಗ ಮತ್ತೆ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುತ್ತಿದೆ. ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿಸಿದರೆ ಪ್ರವಾಸೋದ್ಯಮ ಇಲಾಖೆ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳಲಿದೆ.

                                     ಎಂ.ರಾಜಗೋಪಾಲ್

                                     ಶಾಸಕರು. ತೃಕ್ಕರಿಪುರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries