ತಿರುವನಂತಪುರ: ರಾಜ್ಯ ಪೋಲೀಸರ ನಿಯಂತ್ರಣ ಇನ್ನು ಕೇಂದ್ರ ಚುನಾವಣಾ ಆಯೋಗದ ವಶದಲ್ಲಿರಲಿದೆ. ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್ ಮೀನಾ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯು ಪೋಲೀಸರ ಉಸ್ತುವಾರಿ ವಹಿಸಿಕೊಂಡಿದೆ. ಸಿಐಎಸ್.ಎಫ್ ಹಿರಿಯ ಅಧಿಕಾರಿಯೂ ಸಮಿತಿಯ ಸದಸ್ಯರಾಗಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪೋಲೀಸರನ್ನು ನಿಯಂತ್ರಿಸಲು ಮುಖ್ಯ ಚುನಾವಣಾಧಿಕಾರಿ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್ ಮೀನಾ ಅವರಲ್ಲದೆ, ಸಮಿತಿಯ ಸದಸ್ಯರುಗಳಾಗಿ ಎಡಿಜಿಪಿ ಮನೋಜ್ ಅಬ್ರಹಾಂ, ಬೆಟಾಲಿಯನ್ ಎಡಿಜಿಪಿ ಎಸ್ ಪದ್ಮಕುಮಾರ್ ಮತ್ತು ಸಿಐಎಸ್.ಎಫ್ ಹಿರಿಯ ಅಧಿಕಾರಿಯನ್ನು ನೇಮಿಸಲಾಗಿದೆ. ಮನೋಜ್ ಅಬ್ರಹಾಂ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿಯೊಂದಿಗೆ ಪೋಲೀಸರನ್ನು ನಿಯಂತ್ರಿಸಲಿದ್ದು, ಪದ್ಮಕುಮಾರ್ ಸಶಸ್ತ್ರ ಪಡೆಗಳನ್ನು ನಿಯಂತ್ರಿಸಲಿದ್ದಾರೆ. ಕೇಂದ್ರ ಸೇನೆಯನ್ನು ನಿಯಂತ್ರಿಸಲು ಸಿಐಎಸ್‍ಎಫ್‍ನ ಅಧಿಕಾರಿಯನ್ನು ನೇಮಿಸಲಾಗಿದೆ.
ಇದರೊಂದಿಗೆ ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರು ಇನ್ನು ಮುಂದೆ ಪೋಲೀಸರ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.ಚುನಾವಣಾ ಆಯೋಗ ನಿಯಮಿಸಿದ ಸಮಿತಿ ಇನ್ನು ಪೋಲೀಸರ ಬಗೆಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಈ ವ್ಯವಸ್ಥೆಗಳು ಪ್ರಕರಣಗಳ ತನಿಖೆ ಅಥವಾ ಪೋಲೀಸರ ದಿನನಿತ್ಯದ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯ ಸರ್ಕಾರ ಪೋಲೀಸರನ್ನು ದುರುಪಯೋಗಪಡಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂತಹದೊಂದು ಮಹತ್ವದ ಕ್ರಮ ಕೈಗೊಂಡಿದೆ. ಪೋಲೀಸ್ ಅಧಿಕಾರಿಗಳ ವಿರುದ್ಧ ಇಂತಹ ದೂರುಗಳು ಬಂದರೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕೂ ಇರಲಿದೆ.