ಕುಂಬಳೆ: ಕಿದೂರು ಗ್ರಾಮೀಣ ಪ್ರವಾಸೋದ್ಯಮ ಯೋಜನೆಯನ್ನು ಕಂದಾಯ ಮತ್ತು ವಸತಿ ಸಚಿವ ಇ. ಚಂದ್ರಶೇಖರನ್ ಸೋಮವಾರ ಚಾಲನೆ ನೀಡಿದರು. ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್ ವರದಿ ಮಂಡಿಸಿದರು. ಕುಂಬಳೆ ಗ್ರಾ.ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಮತ್ತು ಡಿ.ಟಿ.ಪಿ.ಸಿ. ಕಾರ್ಯನಿರ್ವಾಹಕ ಸದಸ್ಯ ಕೆ.ಎಸ್. ಆರ್ ಜಯಾನಂದ, ವಾರ್ಡ್ ಸದಸ್ಯ ಕೆ.ಜಿ.ರವಿರಾಜ್ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ಡಿ ಸಜಿತ್‍ಬಾಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರವಾಸೋದ್ಯಮ ವಿಭಾಗದ ಉಪನಿರ್ದೇಶಕ ಥಾಮಸ್ ಆಂಟನಿ ವಂದಿಸಿದರು.
ಕಿದೂರು ಜಿಲ್ಲೆಯ ಅತಿದೊಡ್ಡ ಪಕ್ಷಿಧಾಮವಾಗಲು ಸಜ್ಜು:
ಪಕ್ಷಿಗಳ ನೈಸರ್ಗಿಕ ಆವಾಸಸ್ಥಾನವಾದ ಕುಂಬಳೆ ಗ್ರಾಮ ಪಂಚಾಯಿತಿಯ ಕಿದೂರಿನಲ್ಲಿ ಗ್ರಾಮೀಣ ಪ್ರವಾಸೋದ್ಯಮ ಯೋಜನೆಗಾಗಿ 2.7 ಕೋಟಿ ರೂ.ಮೀಸಲಿರಿಸಲಾಗಿದೆ. ಆರಿಕ್ಕಾಡಿಯಿಂದ 7 ಕಿ.ಮೀ ದೂರದಲ್ಲಿರುವ ಕಿದೂರಲ್ಲಿ ಸುಮಾರು 170 ಪ್ರಬೇಧದ ಪಕ್ಷಿಗಳು ಮತ್ತು ವಲಸೆ ಹಕ್ಕಿಗಳ ಆವಾಸಸ್ಥಾನವಾಗಿ ಗಮನ ಸೆಳೆಯುತ್ತಿದೆ. ಯೋಜನೆಯ ಸಾಕ್ಷಾತ್ಕಾರದೊಂದಿಗೆ, ಕೇರಳದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಕಿದೂರು ಪ್ರಮುಖ ಆಕರ್ಷಣೆಯಾಗಲು ಸಾಧ್ಯವಾಗುತ್ತದೆ. ಕ್ಯಾಂಪಿಂಗ್‍ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಯೋಜನೆಯು ಉದ್ದೇಶಿಸಿದೆ.
ರಿವರ್ಸೈಡ್ ವಾಕ್ ವೇ, ವಿಶ್ರಾಂತಿ ಪ್ರದೇಶ, ಎಲೆಗೊಂಚಲು ಮರಗಳನ್ನು ನೆಡುವುದು ಮತ್ತು ಮರದ ಸಂರಕ್ಷಣಾ ಪಟ್ಟಿಯೊಂದಿಗೆ ಆಸನಗಳನ್ನು ಯೋಜನೆಯ ಭಾಗವಾಗಿ ತಯಾರಿಸಲಾಗುವುದು. ಈ ಯೋಜನೆಯಲ್ಲಿ ಸೌರ ಬೀದಿ ದೀಪಗಳು, ಆಧುನಿಕ ಶೌಚಾಲಯಗಳು ಮತ್ತು ಎಫ್.ಆರ್.ಪಿ ತ್ಯಾಜ್ಯ ಸಂಗ್ರಹ ವ್ಯವಸ್ಥೆಗಳು ಸೇರಿವೆ.
ಪಕ್ಷಿಧಾಮದ ಮೂಲ ಸೌಲಭ್ಯಗಳಿಗಾಗಿ ಕುಂಬಳೆ ಗ್ರಾಮ ಪಂಚಾಯತಿ ಭೂಮಿಯನ್ನು ಮಂಜೂರು ಮಾಡಿದೆ. ನಿರ್ಮಾಣ ಕಾರ್ಯವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಕಲ್ಪಿಸಲಾಗುತ್ತಿದೆ.