ಕೊಚ್ಚಿ: ಮುಷ್ಕರದಲ್ಲಿ ಭಾಗವಹಿಸಿದ ನೌಕರರಿಗೆ ವೇತನ ಸಹಿತ ಇತರ ಸವಲತ್ತು ನೀಡುವ ಸರ್ಕಾರದ ನಡೆಗೆ ಭಾರೀ ಹಿನ್ನಡೆಯಾಗಿದೆ.ಮುಷ್ಕರ ನಡೆಸಿದ ದಿನವನ್ನು ಕರ್ತವ್ಯದ ದಿನವೆಂದು ಹಾಜರಾತಿ ನೀಡಿ ವೇತನ ನೀಡಬಹುದೆಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪನ್ನು ಇಂದು ನೀಡಿದೆ.
ಆಲಪ್ಪುಳ ಕಲರ್ಕೋಟ್ ನಿವಾಸಿ, ಮಾಜಿ ಸರ್ಕಾರಿ ಉದ್ಯೋಗಿ ಜಿ.ಬಾಲಗೋಪಾಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷರಾಗಿರುವ ವಿಭಾಗೀಯ ಪೀಠ ಮಹತ್ತರ ತೀರ್ಪು ನೀಡಿದೆ. ಈಗಾಗಲೇ ವೇತನ ನೀಡಿದ್ದರೆ ಅದನ್ನು ಮರಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸರ್ಕಾರಿ ಉದ್ಯೋಗಿಗಳು ಜನವರಿ 8 ಹಾಗೂ 9 ರಂದು ಮುಷ್ಕರ ನಡೆಸಿದ್ದರು. ಇದರ ಬೆನ್ನಿಗೆ ನೌಕರರಿಗೆ ಸಂಬಳ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ನೀಡಲು ಸರ್ಕಾರ ಆದೇಶ ನೀಡಿತ್ತು.