ತಿರುವನಂತಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ, ಕೇರಳದಲ್ಲಿ ತಾವರೆಯರಳಿಸುವ ಸಂಕಲ್ಪದೊಂದಿಗೆ ಬಿಜೆಪಿ ತನ್ನ ಅಭಿಯಾನವನ್ನು ತೀವ್ರಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಕೇಂದ್ರ ನಾಯಕರು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಪ್ರಚಾರ ಭೂಮಿಕೆಗೆ ಕರೆತರುತ್ತಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪ್ರಬಲ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಮುಖಂಡ ಮತ್ತು ಸಂಸದ ತೇಜಸ್ವಿ ಸೂರ್ಯ ಕೂಡ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ನಾಯಕತ್ವದ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ತನ್ನ ಮತಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಭರವಸೆ ವ್ಯಕ್ತಪಡಿಸಿದೆ. ಬಿಜೆಪಿ ತನ್ನ ರಾಜಕೀಯ ವಿರೋಧಿಗಳನ್ನು ಮಡುಹಲು ಈ ಬಾರಿ ಸ್ಟಾರ್ ಪ್ರಚಾರಕರನ್ನು ಸಜ್ಜುಗೊಳಿಸುವುದು ಖಚಿತವಾಗಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆ ಫೆಬ್ರವರಿ 21 ರಂದು ಚುನಾವಣೆಗೆ ಮುನ್ನ ಪ್ರಾರಂಭವಾಗಲಿದೆ. ವಿಜಯ ಯಾತ್ರೆ ಉದ್ಘಾಟಿಸಲು ಯೋಗಿ ಆದಿತ್ಯನಾಥ್ ಕೇರಳಕ್ಕೆ ಆಗಮಿಸುತ್ತಾರೆ. ವಿಜಯ್ ಯಾತ್ರೆ ಫೆಬ್ರವರಿ 20 ರಂದು ಪ್ರಾರಂಭವಾಗಬೇಕಿತ್ತು. £ಆದರೆ ಯೋಗಿ ಆದಿತ್ಯನಾಥ್ ಅವರ ಅನುಕೂಲಕ್ಕಾಗಿ ಯಾತ್ರೆಯನ್ನು ಮರುದಿನಕ್ಕೆ ಮುಂದೂಡಲಾಯಿತು.
ವಿಜಯ್ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಆಗಮಿಸುತ್ತಾರೆ. ರಾಜ್ಯ ನಾಯಕತ್ವದ ಹೇಳಿಕೆಯಂತೆ ಕಾಸರಗೋಡಿನಿಂದ ತಿರುವನಂತಪುರವರೆಗಿನ ವಿಜಯಯಾತ್ರೆ ರಾಷ್ಟ್ರೀಯ ನಾಯಕರ ಆಗಮನದೊಂದಿಗೆ ರೋಚಕವಾಗಲಿದೆ. ಕೇರಳದ ಸುಮಾರು 100 ಕೇಂದ್ರಗಳಲ್ಲಿ ವಿಜಯ ಯಾತ್ರೆಗೆ ಸ್ವಾಗತ ವ್ಯವಸ್ಥೆ ಮಾಡಲಾಗಿದೆ. ವಿಜಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂಬ ಸೂಚನೆಗಳಿವೆ.