ನವದೆಹಲಿ: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ತಗ್ಗಿಸಲು ಏನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಚಿಂತಾಕ್ರಾಂತವಾಗಿದೆ.
ಈ ನಿಟ್ಟಿನಲ್ಲಿ ಹೊಸ ಐಡಿಯಾ ಒಂದನ್ನು ಮಾಡುತ್ತಿರುವ ಕೇಂದ್ರ, ತೈಲ ದರ ತಗ್ಗಿಸಲು ಮುಂದಾಗಿದೆ. ರಷ್ಯಾ ಸೇರಿದಂತೆ OPEC (Organisation of the Petroleum Exporting Countries) ರಾಷ್ಟ್ರಗಳಿಗೆ ಹಾಗೂ ಅದರ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿರುವ ಭಾರತ ಕೂಡಲೇ ತೈಲ ಉತ್ಪಾದನೆಯನ್ನು ತೀವ್ರಗೊಳಿಸುವಂತೆ ಕೇಳಿಕೊಂಡಿದೆ.
ಇದಲ್ಲದೇ OPEC ರಾಷ್ಟ್ರಗಳಿಗಿಂತಲೂ ಕಡಿಮೆ ದರದಲ್ಲಿ ಇರಾನ್ ಮತ್ತು ವೆನಿಜುವೆಲಾದಿಂದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಕೋವಿಡ್ ಲಾಕ್ಡೌನ್ ತರುವಾಯ ಇತ್ತೀಚೆಗೆ ಆರ್ಥಿಕ ಚಟುವಟಿಕೆಗಲು ಗರಿಗೆದಿರುವುದರಿಂದ ಇಂಧನ ಬಳಕೆ ವ್ಯಾಪಕವಾಗಿ ಹೆಚ್ಚಾಗಿದೆ. ಪ್ರಪಂಚದಲ್ಲಿ ಬಹುತೇಕ ಕಡೆ ಲಾಕ್ಡೌನ್ ಇದ್ದಿದ್ದರ ಸಲುವಾಗಿ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದವು.
ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಕುರಿತಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಪ್ರತಿಕ್ರಿಯಿಸಿದ್ದು, ಬೆಲೆ ಏರಿಕೆಗೆ ಅವರು ಪ್ರಮುಖ ಎರಡು ಕಾರಣಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನವನ್ನು ಕಡಿತಗೊಳಿಸಲಾಗಿದೆ ಹಾಗೂ ತೈಲ ಉತ್ಪಾದಿಸುವ ದೇಶಗಳು ಹೆಚ್ಚು ಲಾಭ ಗಳಿಸಲು ಕಡಿಮೆ ತೈಲ ಉತ್ಪಾದನೆಯೆಡೆ ಗಮನ ಕೊಟ್ಟಿವೆ. ಹೀಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ನಮ್ಮಂತಹ ಬಳಕೆ ರಾಷ್ಟ್ರಗಳಲ್ಲಿ ಹೆಚ್ಚಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಅಲ್ಲದೇ, ಭಾರತ OPEC (Organisation of the Petroleum Exporting Countries) ರಾಷ್ಟ್ರಗಳಿಗೆ ತೈಲ ಉತ್ಪಾದನೆ ಕಡಿತಗೊಳಿಸದಂತೆ ಒತ್ತಾಯ ಮಾಡಿದೆ. ಆದರೆ ಈ ಹಿಂದೆ ಕೋವಿಡ್ ಲಾಕ್ಡೌನ್ ಕಾರಣದಿಂದ ತೈಲ ಉತ್ಪಾದನೆ ಕಡಿತಕ್ಕೆ ಭಾರತ ಬೆಂಬಲಿಸಿತ್ತು ಎಂದು ಹೇಳಿದ್ದಾರೆ.
ಇತ್ತ ಬೆಲೆ ಏರಿಕೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬೆಲೆ ಏರಿಕೆಯೂ ಜನರ ದುಃಖ ಮತ್ತು ಸಂಕಟಗಳಿಂದ ಸರ್ಕಾರ ಲಾಭ ಗಳಿಸುವುದು ಎಂದು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು ವಿನಾಕಾರಣ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ ಎಂದು ಆರೋಪಿಸಿದ್ದಾರೆ.
ಈ ಪರಿಯ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನತೆ ತೀವ್ರ ಸಂಕಟಪಡುತ್ತಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿನ ಉದ್ಯೋಗ, ಕೂಲಿ, ದೈನದಂದಿನ ಆದಾಯವನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂದಿದ್ದಾರೆ. ಯುಪಿಎ ಅವಧಿಯಲ್ಲಿದ್ದ ದರಕ್ಕಿಂತಲೂ ಅರ್ಧ ದರ ಈಗ ಕಚ್ಚಾತೈಲಕ್ಕಿದೆ. ಆದರೂ ನೀವೆಕೆ ಇಷ್ಟು ಪ್ರಮಾಣದಲ್ಲಿ ಇಂಧನ ದರ ಏರುವಂತೆ ಮಾಡಿದಿರಿ ಎಂದು ಸೋನಿಯಾ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಆರೂವರೆ ವರ್ಷಗಳಲ್ಲಿ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಶೇ 820 ರಷ್ಟು ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೇ 258 ರಷ್ಟು ಏರಿಸಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ದೇಶದ ಸಾಮಾನ್ಯ ವರ್ಗದವರ ಹಿತ ಕಾಯುವಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ ಎಂದು ಸೋನಿಯಾ ಆರೋಪಿಸಿದ್ದಾರೆ.