ಪ್ಯಾರಿಸ್ (ಫ್ರಾನ್ಸ್): ನೋವೆಲ್ ಕೊರೋನ ವೈರಸ್ ಬಾವಲಿಗಳಿಂದ ಮಾನವರಿಗೆ ಹರಡುವಲ್ಲಿ ಹವಾಮಾನ ಬದಲಾವಣೆ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಶುಕ್ರವಾರ 'ಸಯನ್ಸ್ ಆಫ್ ದ ಟೋಟಲ್ ಎನ್ವಿರಾನ್‌ಮೆಂಟ್' ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನೆಯೊಂದು ಅಭಿಪ್ರಾಯಪಟ್ಟಿದೆ. ಹವಾಮಾನ ಬದಲಾವಣೆಯಿಂದಾಗಿ ವೈರಸ್‌ಗಳನ್ನು ಹೊತ್ತ ಬಾವಲಿಗಳ ಹಲವು ಪ್ರಭೇದಗಳು ಮಾನವರ ನಿಕಟ ಸಂಪರ್ಕಕ್ಕೆ ಬಂದವು ಎಂದು ಅದು ಹೇಳಿದೆ.
ಜಗತ್ತಿನಾದ್ಯಂತ ಈಗಾಗಲೇ 20 ಲಕ್ಷಕ್ಕಿಂತಲೂ ಅಧಿಕ ಜನರನ್ನು ಬಲಿತೆಗೆದುಕೊಂಡಿರುವ ಸಾಂಕ್ರಾಮಿಕದ ವೈರಸ್ ಆಗ್ನೇಯ ಏಶ್ಯದಲ್ಲಿ ಬಾವಲಿಗಳಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹವಾಮಾನ ಬದಲಾವಣೆಯಿಂದಾಗಿ ಕಳೆದ 100 ವರ್ಷಗಳ ಅವಧಿಯಲ್ಲಿ ಬಾವಲಿಗಳ 40 ಪ್ರಭೇದಗಳು ತಮ್ಮ ವಾಸಸ್ಥಾನವನ್ನು ದಕ್ಷಿಣ ಚೀನಾ, ಲಾವೋಸ್ ಮತ್ತು ಮ್ಯಾನ್ಮಾರ್‌ಗೆ ವರ್ಗಾಯಿಸಿದವು ಎನ್ನುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ವಲಯದಲ್ಲೇ ಕೊರೋನ ವೈರಸ್ ಮೊದಲು ಪತ್ತೆಯಾಯಿತು ಎಂದು ವಿಜ್ಞಾನಿಗಳು ನಡೆಸಿದರು ವಂಶವಾಹಿ ವಿಶ್ಲೇಷಣೆಯೊಂದು ತಿಳಿಸಿದೆ.