ಓಸ್ಲೋ: ರಶ್ಯದ ಭಿನ್ನಮತೀಯ ನಾಯಕ ಅಲೆಕ್ಸಿ ನವಾಲ್ನಿ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಪರಿಸರ ಹೋರಾಟಗಾರ್ತಿ ಬಾಲಕಿ ಗ್ರೇಟಾ ತನ್‌ಬರ್ಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮಕರಣಗೊಂಡಿದ್ದಾರೆ. ಈ ಮೂವರ ನಾಮನಿರ್ದೇಶನವನ್ನು ನೊಬೆಲ್ ಪುರಸ್ಕೃತರನ್ನು ಆಯ್ಕೆ ಮಾಡುವಲ್ಲಿ ಪಾತ್ರ ವಹಿಸುವ ನಾರ್ವೆಯ ಶಾಸನಸಭಾ ಸದಸ್ಯರು, ಬೆಂಬಲಿಸಿದ್ದಾರೆ.
ವಿಶ್ವಾದ್ಯಂತದ ಸಂಸತ್ ಸದಸ್ಯರು, ಮಾಜಿ ನೊಬೆಲ್ ಪುರಸ್ಕೃತರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾವಿರಾರು ಮಂದಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ಅರ್ಹರಾಗಿದ್ದಾರೆ. ರವಿವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಸಮರ್ಥ ಹೋರಾಟ ನಡೆಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲ್ಪಟ್ಟಿದೆ.
ರಶ್ಯವನ್ನು ಶಾಂತಿಯುತವಾಗಿ ಪ್ರಜಾತಾಂತ್ರಿಕ ರಾಷ್ಟ್ರವನ್ನಾಗಿಸಲು ರಶ್ಯದ ಪ್ರತಿಪಕ್ಷ ನಾಯಕ ನವಾಲ್ನಿ ಶ್ರಮಿಸುತ್ತಿರುವುದಕ್ಕಾಗಿ ಅವರ ಹೆಸರನ್ನು ನೊಬೆಲ್ ಶಾಂತಿಪುರಸ್ಕಾರಕ್ಕೆ ನಾರ್ವೆಯ ಮಾಜಿ ಸಚಿವ ಒಲಾ ಎಲ್ವೆಸ್ಟೂಯೆನ್ ಶಿಫಾರಸು ಮಾಡಿದ್ದಾರೆ.
ಬೆಲಾರಸ್‌ನಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವ ಸ್ವಿತ್ಲಾನಾ ತ್ಸಿಕಾನೌಸ್ಕಾಯಾ, ಮಾರಿಯಾ ಕೊಲೆಸ್ನಿಕೊವಾ ಹಾಗೂ ವೆರೋನಿಕಾ ತ್ಸೆಪ್‌ಕಾಲೊ ಅವರ ಹೆಸರನ್ನು ಕೂಡಾ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ.