ಮಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಚುನಾಯಿತರಾದ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದ ಮರುದಿನವೇ ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅಂಬಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಪರಮೇಶ್ವರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಫೆಬ್ರವರಿ 12 ಶುಕ್ರವಾರ ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಲತಾ ಪರಮೇಶ್ವರ್ ಹಾಗೂ ಮೊಹಮ್ಮದ್ ಇಕ್ಬಾಲ್ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗರ್ಭಿಣಿಯಾಗಿದ್ದ ಲತಾ ಪರಮೇಶ್ವರ್ ಅವರಿಗೆ ಫೆಬ್ರವರಿ 20ಕ್ಕೆ ಹೆರಿಗೆಗೆ ದಿನಾಂಕ ನಿಗದಿಯಾಗಿತ್ತು. ಆದಾಗ್ಯೂ, ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೆಬ್ರವರಿ 13 ರ ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.