ಕಲ್ಪೆಟ್ಟ: ಕೃಷಿ ಕಾನೂನುಗಳ ವಿರುದ್ಧ ವಯನಾಡದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಮವಾರ ಟ್ರಾಕ್ಟರ್ ರ್ಯಾಲಿ ನಡೆಯಿತು. ರಾಹುಲ್ ಗಾಂಧಿ ಅವರು ತ್ರಿಕೈಪಟ್ಟದಿಂದ ಮುಟ್ಟಿಲ್ ವರೆಗೆ ಮೂರು ಕಿಲೋಮೀಟರ್ ದೂರ ಟ್ರ್ಯಾಕ್ಟರ್ ಓಡಿಸಿದರು. ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಸಂಸದ ಕೆ.ಸಿ.ವೇಣುಗೋಪಾಲ್ ಮತ್ತು ವಯನಾಡ್ ಜಿಲ್ಲೆಯ ಹಿರಿಯ ಮುಖಂಡರು ಭಾಗವಹಿಸಿದ್ದರು. ರಾಹುಲ್ ಕೇರಳವನ್ನು ಉಳುಮೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ವಿಶ್ವದ ವಿವಿಧ ಭಾಗಗಳಿಂದ ಬಂದ ಪಾಪ್ ತಾರೆಗಳು ಕೃಷಿ ಕಾನೂನಿಗೆ ವಿರುದ್ಧವಾಗಿ ಪ್ರತಿಕ್ರಿಯಿಸುವುದನ್ನು ಕೇಂದ್ರ ಸರ್ಕಾರ ಸಹಿಸುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದಿದ್ದರೆ ಕಾನೂನು ರದ್ದುಗೊಳ್ಳುವ ಸಾಧ್ಯತೆಯಿಲ್ಲ. ಕೃಷಿ ಮಾರುಕಟ್ಟೆಯನ್ನು ನಾಶಮಾಡಲು ಈ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ನರೇಂದ್ರ ಮೋದಿಯ ಇಬ್ಬರು ಅಥವಾ ಮೂರು ಸ್ನೇಹಿತರಿಗಾಗಿ ಇದನ್ನು ಮಾಡಲಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕೇರಳ ಸರ್ಕಾರದ ಶಿಫಾರಸ್ಸಿನ ಮೇರೆಗೆ ವಯನಾಡ್ ಮತ್ತು ಇತರ ಪ್ರದೇಶಗಳಲ್ಲಿ ಬಫರ್ ವಲಯವನ್ನು ಘೋಷಿಸಲಾಗಿದೆ ಎಂದು ಸೂಚಿಸಿದ ಅವರು, ಇದನ್ನು ರದ್ದುಪಡಿಸಲು ಕೇರಳ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಹುಲ್ ಗಾಂಧಿ ನಾಲ್ಕು ದಿನಗಳ ಭೇಟಿಗಾಗಿ ವಯನಾಡಿಗೆ ಭಾನುವಾರ ಸಂಜೆ ಆಗಮಿಸಿದರು. ಪೂಡಾಡಿ ಮತ್ತು ಮೆಪ್ಪಾಡಿ ಶಾಲೆಯಲ್ಲಿ ಕುಟುಂಬಶ್ರೀ ಸಂಘಗಳಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ರಾಹುಲ್ ಭಾಗವಹಿಸಿದರು.