ಮಂಗಳೂರು: ಮಂಗಳೂರಿನ ಪೆಣಂಬೂರಿನಲ್ಲಿ 2016ರಲ್ಲಿ ನಡೆದಿದ್ದ ರೇಖಪ್ಪ ಲಮಾಣಿ ಎಂಬುವವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ದೇವರಗುಡ್ಡದ ನಿವಾಸಿ ನಾಗರಾಜ ಗೋವಿಂದಪ್ಪ ಲಮಾಣಿ (28) ಮತ್ತು ರಾಣೇಬೆನ್ನೂರಿನ ಹನುಮಾಪುರದ ವೀರೇಶ್ ಶಿವಪ್ಪ ಲಮಾಣಿ (32) ಶಿಕ್ಷೆಗೊಳಗಾದವರು. ಮೃತ ರೇಖಪ್ಪ ಲಮಾಣಿ ಕೂಡ ರಾಣೆಬೆನ್ನೂರಿನವರಾಗಿದ್ದು, ನಾಗರಾಜ ಗೋವಿಂದಪ್ಪ ಲಮಾಣಿಯ ಪತ್ನಿಯ ಅಕ್ಕನ ಪತಿ.
ಪ್ರಕರಣದ ವಿವರ:
ಆರೋಪಿ ನಾಗರಾಜ ಗೋವಿಂದಪ್ಪ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಂಗಡಿಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ತನ್ನ ಪತ್ನಿಯ ಅಕ್ಕನ ಪತಿ ರೇಖಪ್ಪ ಲಮಾಣಿಯನ್ನು ಕೂಡ ಕೂಲಿ ಕೆಲಸಕ್ಕಾಗಿ ಹೊಸಂಗಡಿಗೆ ಕರೆದುಕೊಂಡು ಬಂದಿದ್ದ. ಈತ ರೇಖಪ್ಪ ಲಮಾಣಿಯ ಪತ್ನಿ ಸಾವಿತ್ರಿ (ಪತ್ನಿಯ ಅಕ್ಕ) ಎಂಬುವರ ಸಂಬಂಧ ಬಯಸಿದ್ದ. ಆಕೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ.
ಇದು ರೇಖಪ್ಪ ಲಮಾಣಿಗೆ ತಿಳಿದು, ಅವರು 2016ರ ಸೆಪ್ಟೆಂಬರ್ 4ರಂದು ತನ್ನ ಹುಟ್ಟೂರಿಗೆ ತೆರಳಲು ಸಿದ್ಧರಾಗಿದ್ದರು. ಆಗ ನಾಗರಾಜ ಗೋವಿಂದಪ್ಪ ತನ್ನ ಸ್ನೇಹಿತನಾದ ವೀರೇಶ್ ಶಿವಪ್ಪ ಲಮಾಣಿ ಎಂಬಾತನನ್ನು ಸೇರಿಸಿಕೊಂಡು ರೇಖಪ್ಪ ಲಮಾಣಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹೊಸಂಗಡಿಯಿಂದ ಮಂಗಳೂರಿಗೆ ಕರೆದುಕೊಂಡು ಬಂದು, ಮಂಗಳೂರಿನಲ್ಲಿ ಬಾರ್‌ವೊಂದರಲ್ಲಿ ಮದ್ಯ ಕುಡಿಸಿ ಪೆಣಂಬೂರಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಅಲ್ಲಿನ ನಿರ್ಜನ ಸ್ಥಳದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ದೊಡ್ಡ ಕಲ್ಲನ್ನು ರೇಖಪ್ಪ ಲಮಾಣಿ ಅವರ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದರು.
ಕೊಲೆಯಾದ ಪ್ರಕರಣ ಎರಡು ದಿನಗಳ ಬಳಿಕ ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಪೊಲೀಸರು ಮೊದಲು ಅಸ್ವಾಭಾವಿಕ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಅನಂತರ ಶವ ಮಹಜರು ಸಂದರ್ಭ ಸಾಕ್ಷಿದಾರರು ನೀಡಿದ ಹೇಳಿಕೆ ಮತ್ತು ಮರಣೋತ್ತರ ಪರೀಕ್ಷಾ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಪಣಂಬೂರು ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಅಭಿಯೋಜನಾ ಪಕ್ಷದ ಪರ 22 ಮಂದಿಯನ್ನು ಸಾಕ್ಷಿದಾರರಾಗಿ ವಿಚಾರಿಸಲಾಗಿತ್ತು. ಕೊಲೆ ಮಾಡಿದ್ದನ್ನು ನೋಡಿದ ಯಾವುದೇ ಪ್ರತ್ಯಕ್ಷ ಸಾಕ್ಷಿದಾರರು ಇರದೇ ಇರುವುದರಿಂದ ಕೇವಲ ಸಾಂದರ್ಭಿಕ ಸಾಕ್ಷಿಯನ್ನು ಮಾತ್ರ ಪರಿಗಣಿಸಲಾಗಿತ್ತು. ಕೂಳೂರುವರೆಗೆ ಮೋಟಾರ್ ಸೈಕಲ್‌ನಲ್ಲಿ ಡ್ರಾಪ್ ನೀಡಿದವರು, ಅನಂತರ ಕೂಳೂರಿನಿಂದ ಪಂಪ್‌ವೆಲ್‌ಗೆ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಚಾಲಕ, ಮದ್ಯ ಸೇವಿಸಿದ ಬಾರ್‌ನ ಮೇಲ್ವಿಚಾರಕರನ್ನು ವಿಚಾರಣೆಗೆ ಒಳಪಡಿಸಿದ್ದರು.
ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ ಸಾಕ್ಷ್ಯ, ಆರೋಪಿಗಳು ಕೊಲೆ ಮಾಡುವ ಸಮಯದಲ್ಲಿ ಧರಿಸಿದ್ದ ಬಟ್ಟೆಗಳ ಮೇಲೆ ಇದ್ದ ರಕ್ತದ ಕಲೆಗಳ ಬಗ್ಗೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದವರು ನೀಡಿದ ಸಾಕ್ಷ್ಯ, ಘಟನಾ ಸ್ಥಳದ ಮಣ್ಣು ಆರೋಪಿಗಳು ಧರಿಸಿದ ಬಟ್ಟೆಗಳ ಮೇಲೆ ಇದ್ದ ಬಗ್ಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದವರು ನೀಡಿದ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿ ಆರೋಪಿಗಳು ಕೊಲೆ ಮಾಡಿರುವುದನ್ನು ಅಭಿಯೋಜನಾ ಪಕ್ಷದವರು ರುಜುವಾತುಪಡಿಸಿರುವುದಾಗಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
10 ಸಾವಿರ ರೂ. ದಂಡದ ಹಣವನ್ನು ರೇಖಪ್ಪ ಲಮಾಣಿ ಅವರ ಪತ್ನಿಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ ರೇಖಪ್ಪ ಲಮಾಣಿ ಅವರ ಪತ್ನಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಸೇರಿಗಾರ್ ಯು. ವಾದ ಮಂಡಿಸಿದ್ದರು.