ಕಾಸರಗೋಡು: ಮಹಿಳೆಯಿಂದಲೇ ಸಮಾಜಕ್ಕೆ ಸಂಸ್ಕಾರ, ಸಮಾಜದಿಂದ ರಾಷ್ಟ್ರೋತ್ಥಾನ. ಈ ಮೂಲಕ ವಿಶ್ವಮಾನವ ಧರ್ಮದ ಸಾಕ್ಷಾತ್ಕಾರ ಎಂದು ಒಡಿಯೂರು ಶ್ರೀ ಕ್ಷೇತ್ರದ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ಅವರು ನುಡಿದರು.
ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಕಾಸರಗೋಡು ವಲಯ ಸಮಿತಿ ಮತ್ತು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ ಮಹಿಳಾ ಕ್ರೀಡೋತ್ಸವ, ಆಹಾರೋತ್ಸವ, ಸಂಕೀರ್ತನೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಾದ್ವಿ ಮಾತಾನಂದಮಯಿ ಅವರು ಆಶೀರ್ವಚನವಿತ್ತರು.
ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಅವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಕೌನ್ಸಿಲರ್‍ಗಳಾದ ಶಾರದಾ ಬಿ, ಶ್ರೀಲತಾ, ಮಧೂರು ಗ್ರಾಮ ಪಂಚಾಯತ್ ಸದಸ್ಯೆ ಉಷಾ ಸುರೇಶ್ ಭಾಗವಹಿಸಿದರು. ವಲಯ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕಾರ್ಯಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಗ್ರಾಮ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾವ್ಯ ಕುಶಲ ಸ್ವಾಗತಿಸಿದರು. ಕಾಸರಗೋಡು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿದರು. ಪ್ರೀತಿಕ ನವೀನ ಜೆ.ಪಿ.ನಗರ ವಂದಿಸಿದರು. ಗ್ರೀಷ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಸಾದ್ವಿ ಶ್ರೀ ಮಾತಾನಂದಮಯಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.