ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಲ ಇಂದಿನಿಂದ (ಫೆ.22) ತಲಪಾಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ಅನ್ನು ಪುನರಾರಂಭಿಸಲಾಗಿದೆ.
ದ.ಕ. ತಹಶೀಲ್ದಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಪೊಲೀಸರು ಕೇರಳದಿಂದ ಬರುವವರ ವಿಚಾರಣೆ ನಡೆಸುತ್ತಿದ್ದಾರೆ
"ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸಹಿತ ದ.ಕ. ಸಂಪರ್ಕಿಸುವ ತಲಪಾಡಿ, ಸಾರಡ್ಕ, ಸುಳ್ಯದ ಜಾಲ್ಸೂರು, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇನಾಲ ಗಡಿಗಳಲ್ಲಿ ಮಾತ್ರ ದ.ಕ. ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಇತರ ಗಡಿಗಳ ಮೂಲಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ" ಎಂದು ಜಿಲ್ಲಾಡಳಿತ ಹೇಳಿದೆ.
ಪ್ರಯಾಣಕ್ಕೆ ಅವಕಾಶ ನೀಡಿರುವ ಐದು ಗಡಿಗಳಲ್ಲಿ ದ.ಕ ಜಿಲ್ಲೆಗೆ ಆಗಮಿಸುವವರಿಗೆ ಕೊರೊನಾ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. 72 ಗಂಟೆಯೊಳಗೆ ನಡೆಸಿದ ಪರೀಕ್ಷಾ ವರದಿ ಕಡ್ಡಾಯವಾಗಿದೆ. 72 ಗಂಟೆ ಮೀರಿದ ವರದಿ ಪರಿಗಣಿಸಲಾಗುವುದಿಲ್ಲ ಎಂದು ದ.ಕ.ಜಿಲ್ಲಾಡಳಿತ ಸೂಚಿಸಿದೆ.
ಏತನ್ಮಧ್ಯೆ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಕೇರಳ ಭಾಗದಿಂದ ಭಾರೀ ಪ್ರತಿಭಟನೆ ವ್ಯಕ್ತವಾಯಿತು.ಗಡಿ ಗ್ರಾಮ ಮಂಜೇಶ್ವರ ಗ್ರಾ.ಪಂ. ಸಹಿತ ಇತರ ನಾಗರಿಕರು,ರಾಜಕೀಯ,ಸಾಮಾಜಿಕ ನೇತಾರರು ಪ್ರತಿಭಟನೆ ನಡೆಸಿ ನ್ಯಾಯಯುತ ಕ್ರಮಕ್ಕೆ ಒತ್ತಾಯಿಸಿದವು. ತತ್ಪರಿಣಾಮ ಇಂದು ಕಾಸರಗೋಡು ಕಡೆಯಿಂದ ದ.ಕ.ಪ್ರವೇಶಿಸುವ ಜನರನ್ನು ತಪಾಸಣೆ ನಡೆಸಿ ಕೋವಿಡ್ ವರದಿ ನೀಡಿ ನಾಳೆಯಿಂದ ಆಗಮಿಸುವಂತೆ ಕಠಿನ ನಿರ್ದೇಶನ ನೀಡಿದೆ.
ಆದರೆ ಸಾರಡ್ಕ ಮತ್ತು ಜಾಲ್ಸೂರು ಗಡಿಗಳಲ್ಲಿ ಕೋವಿಡ್ ತಪಾಸಣೆಗೊಳಗಾಗಿ ಜನರು ಸಂಚರಿಸಿದರು. ದೊಡ್ಡ ಸರತಿ ಸಾಲು ತಪಾಸಣೆಗೆ ಕಂಡುಬಂತು.