HEALTH TIPS

ಹಳೆಯ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಗೆ ಆಕರ್ಷಕ ಸೌಲಭ್ಯ: ಗಡ್ಕರಿ

          ನವದೆಹಲಿ: ಹಳೆಯ ಮತ್ತು ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿ ಹಾಕಲು ಮುಂದಾಗುವ ಮಾಲೀಕರಿಗೆ ಹೊಸ ವಾಹನಗಳ ಖರೀದಿಗೆ ಆಕರ್ಷಕ ಸೌಲಭ್ಯಗಳು ದೊರೆಯಲಿವೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

             2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ 'ಸ್ಕ್ರ್ಯಾಪಿಂಗ್ ಪಾಲಿಸಿ' (ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ) ಅನ್ವಯ ಈ ಕ್ರಮಗಳನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.

           'ಹೊಸ ಕ್ರಮಗಳಿಂದ ಭಾರತದ ಆಟೊಮೊಬೈಲ್‌ ಉದ್ಯಮದ ಬೆಳವಣಿಗೆ ಶೇಕಡ 30ರಷ್ಟು ಹೆಚ್ಚಲಿದೆ. ಪ್ರಸ್ತುತ ₹4.5 ಲಕ್ಷ ಕೋಟಿ ವಹಿವಾಟು ನಡೆಸುತ್ತಿರುವ ಆಟೊಮೊಬೈಲ್‌ ಉದ್ಯಮವು ಭವಿಷ್ಯದಲ್ಲಿ ₹10 ಲಕ್ಷ ಕೋಟಿಗೂ ಹೆಚ್ಚು ವಹಿವಾಟುನಡೆಸುವ ನಿರೀಕ್ಷೆ ಇದೆ' ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

        'ಸ್ಕ್ರ್ಯಾಪಿಂಗ್ ಪಾಲಿಸಿಯಿಂದ ಆರ್ಥಿಕತೆಗೆ ಉತ್ತೇಜನ ದೊರೆಯುವ ಜತೆಗೆ ಆಟೊಮೊಬೈಲ್‌ ಉದ್ಯಮಕ್ಕೂ ಲಾಭವಾಗಲಿದೆ. ಜತೆಗೆ, ವಾಹನ ಮಾಲಿನ್ಯಕ್ಕೂ ಕಡಿವಾಣ ಬೀಳಲಿದೆ. ವಾಹನಗಳನ್ನು ಗುಜರಿಗೆ ಹಾಕುವವರಿಗೆ ತಯಾರಕರಿಂದ ಹಲವು ರಿಯಾಯಿತಿಗಳು ದೊರೆಯಲಿವೆ' ಎಂದು ಅವರು ತಿಳಿಸಿದ್ದಾರೆ.

              'ಹೊಸ ನೀತಿಯ ವಿವರಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಈ ನೀತಿಯಿಂದಾಗಿ ಮುಂದಿನ ದಿನಗಳಲ್ಲಿ ಆಟೊಮೊಬೈಲ್‌ ಉದ್ಯಮವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

       ಸ್ವಯಂ ಪ್ರೇರಿತವಾಗಿ ವಾಹನಗಳನ್ನು ಗುಜರಿ ಹಾಕುವುದನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಹೀಗಾಗಿ, ಹಳೆಯ ಮತ್ತು ಮಾಲಿನ್ಯ ಉಂಟು ಮಾಡುವ ವಾಹನಗಳ ಮಾಲೀಕರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವರು, 'ಹಸಿರು ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ. ಜತೆಗೆ, ವಾಹನದ ಕ್ಷಮತಾ ಪರೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.

       'ಸುಮಾರು ಒಂದು ಕೋಟಿ ವಾಹನಗಳು ಗುಜರಿ ಸೇರಬಹುದು. ಹೊಸ ನೀತಿಯಿಂದ ಉಕ್ಕು, ಪ್ಲಾಸ್ಟಿಕ್‌, ರಬ್ಬರ್‌ ಮುಂತಾದ ಗುಜರಿ ಸಾಮಾನುಗಳ ಲಭ್ಯತೆಯೂ ಹೆಚ್ಚಳವಾಗಲಿದೆ. ಈ ಗುಜರಿ ಸಾಮಾನುಗಳನ್ನು ಸಹ ಆಟೊಮೊಬೈಲ್‌ ತಯಾರಿಸಲು ಬಳಸುವುದರಿಂದ ಹೊಸ ವಾಹನಗಳ ಮೌಲ್ಯವು ಸಹ ಶೇಕಡ 30ರಿಂದ 40ರಷ್ಟು ಕಡಿಮೆಯಾಗಲಿದೆ. ಹೊಸ ತಂತ್ರಜ್ಞಾನ ಅಳವಡಿಸಲು ಹೊಸ ನೀತಿಯಲ್ಲಿ ಉತ್ತೇಜನ ನೀಡಲಾಗುವುದು.' ಎಂದು ವಿವರಿಸಿದ್ದಾರೆ.

         'ಹಸಿರು ತೆರಿಗೆ ವಿಧಿಸುವ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಹಲವು ರಾಜ್ಯಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ. ಹಳೆಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಸೂಚನೆ ನೀಡುತ್ತೇವೆ' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಕಾರ್ಯದರ್ಶಿ ಗಿರಿಧರ್‌ ಅರಮಾನೆ ತಿಳಿಸಿದ್ದಾರೆ.

       ಹಳೆಯ ವಾಹನಗಳನ್ನು ಗುಜರಿಗೆ ವಿಲೇವಾರಿ ಮಾಡುವ ನೀತಿ ಅನ್ವಯ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ ನಡೆಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries