ವಾಷಿಂಗ್ಟನ್ : ಕೊರೊನಾ ನಿರ್ಬಂಧ ಸಡಿಲಿಕೆ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.
ಕೊರೊನಾ ವೈರಸ್ ವಿಶ್ವವ್ಯಾಪಿಯಾಗುವುದರ ಜತೆಗೆ ಬೇರೆ ಬೇರೆ ರೂಪವನ್ನು ತಾಳಿದೆ, ಇಂತಹ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದೆ.
ಸತತ ನಾಲ್ಕನೇ ವಾರವೂ ಸೋಂಕು ಪ್ರಕರಣಗಳು ಕಡಿಮೆಯಾಗಿವೆ. ಜತೆಗೆ ಸತತ ಎರಡನೇ ವಾರವೂ ಸಾವಿನ ಪ್ರಕರಣಗಳು ಸಹ ಕಡಿಮೆಯಾಗಿವೆ. ಎಲ್ಲಾ ರಾಷ್ಟ್ರಗಳಲ್ಲಿ ಆರೋಗ್ಯ ರಕ್ಷಣೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಸೋಂಕು ಪ್ರಕರಣಗಳು ಕಡಿಮೆಯಾಗಿರಬಹುದು. ಆದರೆ, ಈ ಪರಿಸ್ಥಿತಿ ಅನಿಶ್ಚಿತತೆಯಿಂದ ಮತ್ತು ಅಪಾಯದಿಂದ ಕೂಡಿದೆ.
ಹಾಗಿದ್ದರೂ ಕೂಡ ಯಾವುದೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಬೇಜಾವಾಬ್ದಾರಿಯಿಂದ ವರ್ತಿಸಿಬಾರದು, ಈ ರೀತಿ ಮನೋಭಾವ ಇಡೀ ದೇಶದ ಜನರನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ವೈರಸ್‌ನ ಮೂಲದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ, ಡಿಸೆಂಬರ್‌ನಲ್ಲಿ ಮನುಷ್ಯರಿಗೆ ಯಾವ ಮಾರ್ಗದಲ್ಲಿ ವೈರಸ್ ಪ್ರವೇಶಿಸಿತು ಎನ್ನುವ ಕುರಿತು ಅಧ್ಯಯನಗಳು ನಡೆಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವೈರಸ್ ಪ್ರಾಣಿಗಳಿಂದ ಮನುಷ್ಯನಿಗೆ ಮೊದಲು ತಗುಲಿರಬಹುದು,ಚೀನಾ ಪ್ರಯೋಗಾಲಯದಿಂದ ಕೊರೊನಾ ವೈರಸ್ ಹಬ್ಬಿದೆ ಎನ್ನುವ ಸಾಧ್ಯತೆ ಕಡಿಮೆ ಎಂದು ಚೀನಾ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧಕರನ್ನೊಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಹೇಳಿಕೆ ನೀಡಿತ್ತು.