ನವದೆಹಲಿ:ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ನೂರನೇ ದಿನಕ್ಕೆ ಕಾಲಿಡಲಿದೆ.ತಮ್ಮ ಚಳವಳಿ ಮುಗಿದಿಲ್ಲ, ಗಟ್ಟಿ ದನಿಯೊಂದಿಗೆ ಸಾಗುತ್ತಿರುವುದಾಗಿ ಯೂನಿಯನ್ ಮುಖಂಡರು ಹೇಳಿದ್ದಾರೆ.
ಮ್ಯಾರಥಾನ್ ಆಂದೋಲನವು ಏಕತೆಯ ಸಂದೇಶವನ್ನು ರವಾನಿಸಿದೆ. ಮತ್ತೊಮ್ಮೆ ರೈತರು ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ದೇಶದ ರಾಜಧಾನಿಗೆ ಮತ್ತೆ ರೈತರನ್ನು ಕರೆತರಲಾಗುವುದು ಎಂದು ಅವರು ಶುಕ್ರವಾರ ಹೇಳಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಕಳೆದ ಮೂರು ತಿಂಗಳಿನಿಂದಲೂ ಸಹಸ್ರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಗತ್ಯವಿದ್ದರೆ ಧೀರ್ಘಕಾಲ ಪ್ರತಿಭಟನೆ ಮುಂದುವರೆಸಲು ಸಿದ್ಧಗೊಂಡಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ನಾವು ಸಂಪೂರ್ಣವಾಗಿ ಸಿದ್ಧಗೊಂಡಿದ್ದೇವೆ. ಸರ್ಕಾರ ನಮ್ಮ ದನಿ ಕೇಳುವವರೆಗೂ , ಬೇಡಿಕೆ ಈಡೇರಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಚಳವಳಿ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಟಿಕಾಯತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸರ್ಕಾರ ಮತ್ತು ರೈತ ಯೂನಿಯನ್ ಗಳ ನಡುವೆ ನಡೆದಿರುವ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ತಮ್ಮ ಪಟ್ಟನ್ನು ಸಡಿಲಿಸದಿರಲು ರೈತರು ನಿರ್ಧರಿಸಿದ್ದಾರೆ.