ಲಖನೌ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತದ ಪರ ಮಿಥಾಲಿ ರಾಜ್ 50 ಎಸೆತಗಳಲ್ಲಿ 36ರನ್ ಗಳಿಸಿದರು. ಆ ಮೂಲಕ ಜಾಗತಿಕ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ದಾಖಲೆ ನಿರ್ಮಿಸಿದರು.
ಮೂಲಕ ಭಾರತದ ಪರ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಅಂತೆಯೇ ಜಾಗತಿಕವಾಗಿ ಈ ದಾಖಲೆ ಬರೆದ 2ನೇ ಆಟಗಾರ್ತಿಯಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ ನ ಚಾರ್ಲೋಟ್ ಎಡ್ವರ್ಡ್ಸ್ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿಯಾಗಿದ್ದಾರೆ. ಚಾರ್ಲೊಟ್ ಎಡ್ವರ್ಡ್ಸ್ 309 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10,273 ರನ್ ಗಳಿಸಿದ್ದಾರೆ.
ಮಿಥಾಲಿ ರಾಜ್ 311 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ್ದಾರೆ. ಈ ಪೈಕಿ 10 ಟೆಸ್ಟ್ ಪಂದ್ಯಗಳಿಂದ 663 ರನ್, 89 ಟಿ20 ಪಂದ್ಯಗಳಿಂದ 2364 ರನ್ ಮತ್ತು 212 ಏಕದಿನ ಪಂದ್ಯಗಳಿಂದ 6938 ರನ್ ಗಳನ್ನು ಗಳಿಸಿದ್ದಾರೆ.