ಇಸ್ಲಾಮಾಬಾದ್: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನವೀಕರಣ ಕೆಲಸ ನಡೆಯುತ್ತಿರುವ 100 ವರ್ಷಕ್ಕೂ ಹಳೆಯ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಕಳೆದ ಶನಿವಾರ ರಾವಲ್ಪಿಂಡಿಯ ಪುರಾನಾ ಕ್ವಿಲಾ ಪ್ರದೇಶದಲ್ಲಿ 10ರಿಂದ 15 ಮಂದಿ ದುಷ್ಕರ್ಮಿಗಳು ಸಾಯಂಕಾಲ 7.30ರ ಸುಮಾರಿಗೆ ದೇವಾಲಯದ ಮುಖ್ಯ ದ್ವಾರ ಮತ್ತು ಮತ್ತು ಇತರ ದ್ವಾರವನ್ನು, ಸ್ಟೈರ್ ಕೇಸ್ ಗಳನ್ನು ಹಾನಿ ಮಾಡಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಉತ್ತರ ವಲಯದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ)ನ ಭದ್ರತಾ ಅಧಿಕಾರಿ ಸೈಯದ್ ರಾಜಾ ಅಬ್ಬಾಸ್ ಜೈದಿ ರಾವಲ್ಪಿಂಡಿಯ ಬನ್ನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ದೇವಾಲಯದ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ದೇವಸ್ಥಾನದ ಮುಂದೆ ಕೆಲವು ಜಾಗ ಅತಿಕ್ರಮಣವಾಗಿತ್ತು, ಅದನ್ನು ಮಾರ್ಚ್ 24ರಂದು ತೆಗೆಯಲಾಗಿತ್ತು. ಆದರೆ ಇನ್ನೂ ಈ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿಲ್ಲ, ಯಾವುದೇ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಿಲ್ಲ.
ದೇವಸ್ಥಾನದ ಆಸ್ತಿಪಾಸ್ತಿಗೆ ಹಾನಿಯನ್ನುಂಟುಮಾಡಿದವರಿಗೆ ಮತ್ತು ಅದರ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ದೇವಸ್ಥಾನಕ್ಕೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ದೇವಸ್ಥಾನದ ಆಡಳಿತಗಾರ ಓಂ ಪ್ರಕಾಶ್ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕರಾಕ್ ಜಿಲ್ಲೆಯ ಖೈಬರ್ -ಪಕ್ತುಂಕವ ಪ್ರಾಂತ್ಯದಲ್ಲಿರುವ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.