ನವದೆಹಲಿ: ಆರ್ಥಿಕವಾಗಿ ದುರ್ಬಲವಾದ ಮೇಲ್ಜಾತಿಗಳಿಗೆ ಶೇ 10ರಷ್ಷು ಮೀಸಲಾತಿ ಅವಕಾಶ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಗೆ ಸಂಬಂಧಿಸಿದ ಸಚಿವ ಸಂಪುಟದ ಟಿಪ್ಪಣಿ ಮತ್ತು ಪತ್ರ ವ್ಯವಹಾರ ಮತ್ತು ಅನುಬಂಧವನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಚಿವ ಸಂಪುಟದ ಟಿಪ್ಪಣಿ ಸೇರಿದಂತೆ ಸಚಿವರು, ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳು ನೀಡುವ ದಾಖಲೆಗಳನ್ನು ಬಹಿರಂಗಪಡಿಸಲು ವಿನಾಯಿತಿ ನೀಡುವ ಮಾಹಿತಿ ಹಕ್ಕು ಸೆಕ್ಷನ್ 8(1) ಉಲ್ಲೇಖಿಸಿ ಮಂಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಾದವನ್ನು ಮಾಹಿತಿ ಆಯೋಗ ತಳ್ಳಿ ಹಾಕಿತು. ಇದು ಪೂರ್ಣವಾಗಿ ಒಪ್ಪುವಂಥದ್ದಲ್ಲ ಎಂದು ಹೇಳಿತು.
ಮಂತ್ರಿ ಮಂಡಳಿಯ ನಿರ್ಧಾರಗಳು, ನಿರ್ಧಾರ ತೆಗೆದುಕೊಂಡಿದ್ದರ ಹಿಂದಿನ ಕಾರಣಗಳು ಮತ್ತು ಯಾವ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಈ ಸೆಕ್ಷನ್ ಅನುಮತಿ ನೀಡುತ್ತದೆ ಎಂದು ಆಯೋಗ ಹೇಳಿದೆ.