ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಲ ನೀಡಿದ್ದ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಸಂಶೋಧಿಸಿದ್ದ ಕೋವಿಶೀಲ್ಡ್ ಲಸಿಕೆ ಮೇಲೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ.
ಕೋವಿಶೀಲ್ಡ್ ಲಸಿಕೆ ಬಳಕೆಯಿಂದ ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳಾಗುತ್ತಿವೆ ಎಂದು ಆರೋಪಿಸಿ 10 ದೇಶಗಳು ಈ ಲಸಿಕೆಯ ಬಳಕೆಯನ್ನು ನಿಷೇಧಿಸಿವೆ. ಇದೇ ಕಾರಣಕ್ಕೆ ಇದೀಗ ಭಾರತ ಕೂಡ ಕೋವಿಶೀಲ್ಡ್ ಲಸಿಕೆಯ ಬಳಕೆಯ ಕುರಿತು ಪುನರ್ ಪರಿಶೀಲನೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಸಂಶೋಧಿಸಿದ್ದ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಗಂಭೀರ ಸ್ವರೂಪದಲ್ಲಿ ರಕ್ತಹೆಪ್ಪುಗಟ್ಟಿವಿಕೆಯ ಸಮಸ್ಯೆಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಯೂರೋಪಿಯನ್ ದೇಶಗಳಲ್ಲಿ ಈ ಕೋವಿಶೀಲ್ಡ್ ಲಸಿಕೆಯ ಬಳಕೆಯನ್ನು ನಿಷೇಧಿಸಲಾಗಿದೆ. ಇದೇ ಕಾರಣಕ್ಕೆ ಇದೀಗ ಭಾರತ ಕೂಡ ಕೋವಿಶೀಲ್ಡ್ ಲಸಿಕೆಯ ಬಳಕೆಯನ್ನು ಪುನರ್ ಪರಿಶೀಲನೆ ಮಾಡಲು ಮುಂದಾಗಿದೆ ಎನ್ನಲಾಗಿದೆ.
10 ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ನಿಷೇಧ
ಯೂರೋಪಿನ 10 ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ನಿಷೇಧ ಹೇರಲಾಗಿದೆ. ಪ್ರಮುಖವಾಗಿ ನಾರ್ವೆ, ಐಲೆಂಡ್, ಆಸ್ಟ್ರಿಯಾ, ಎಸ್ಟೋನಿಯಾ, ಲಿಥುವೇನಿಯಾ, ಲಕ್ಸೆಂಬರ್ಗ್, ಇಟಲಿ ಮತ್ತು ಲಾಟ್ವಿಯಾದಲ್ಲಿ ಕೋವಿಶೀಲ್ಡ್ ಬಳಕೆಗೆ ನಿಷೇಧ ಹೇರಲಾಗಿದೆ. ಇತ್ತೀಚೆಗೆ ಈ ಪಟ್ಟಿಗೆ ಡೆನ್ಮಾರ್ಕ್ ಕೂಡ ಸೇರ್ಪಡೆಯಾಗಿದ್ದು, ಮುಂದಿನ 2 ವಾರಗಳ ಕೋವಿಶೀಲ್ಡ್ ಲಸಿಕೆ ಬಳಕೆ ಮಾಡದಂತೆ ಡೆನ್ಮಾರ್ಕ್ ಸೂಚನೆ ನೀಡಲಾಗಿದೆ. ಅಲ್ಲದೆ ಲಸಿಕೆ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು ಅದರ ವರದಿ ಬರುವವರೆಗೂ ಕೋವಿಶೀಲ್ಡ್ ಲಸಿಕೆ ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಈ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿ ಮಾರಾಟ ಮಾಡುತ್ತಿದೆ. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವ ಆರೋಗ್ಯ ಸಂಸ್ಛೆ, ಅಸ್ಟ್ರಾಜೆನೆಕಾ ಲಸಿಕೆ ಬಳಕೆ ಮೇಲೆ ನಿಷೇಧ ಹೇರಲು ಯಾವುದೇ ಕಾರಣಗಳಿಲ್ಲ. ಅಂತೆಯೇ ಲಸಿಕೆಗಳ ಸಲಹಾ ಸಮಿತಿಯು ಸುರಕ್ಷತಾ ದತ್ತಾಂಶವನ್ನು ಪರಿಶೀಲನೆ ಮಾಡುತ್ತಿದೆ. ಪ್ರಾಥಮಿಕ ವರದಿಯಲ್ಲಿ ಲಸಿಕೆ ಮತ್ತು ಹೆಪ್ಪುಗಟ್ಟುವಿಕೆಯ ನಡುವೆ ಯಾವುದೇ ಸಂಬಂಧವಿಲ್ಲ.
ಕೇಂದ್ರ ಆರೋಗ್ಯ ಇಲಾಖೆಯೂ ಸ್ಪಷ್ಟನೆ ನೀಡಿದ್ದು, ಲಸಿಕೆಯಿಂದಾಗಿ ಉಂಟಾಗುವ ರೋಗ ನಿರೋಧಕ ಶಕ್ತಿ ಮತ್ತು ಪ್ರತಿಕೂಲ ಪರಿಣಾಮಗಳ ಕುರಿತು ಸಮಿತಿ ಪರಿಶೀಲನೆ ನಡೆಸಿ ನಿರ್ಣಯಿಸುತ್ತದೆ ಎನ್ನಲಾಗಿದೆ.
"ಕೋವಿಶೀಲ್ಡ್ ಲಸಿಕೆಗೆ ಸಂಬಂಧಿಸಿದಂತೆ ನಾವು ಇಲ್ಲಿಯವರೆಗೆ ಯಾವುದೇ ರೀತಿಯ ನಿರ್ಣಾಯಕ ನಕಾರಾತ್ಮಕ ಅಂಶಗಳನ್ನು ಕಂಡುಕೊಂಡಿಲ್ಲ. ಅದಾಗ್ಯೂ ಕೋವಿಶೀಲ್ಜ್ ಲಸಿಕೆ ನೀಡುತ್ತಿರುವ ಲಸಿಕಾ ಕೇಂದ್ರಗಳು ಮತ್ತು ಆಸ್ಪತ್ರೆಗಳ ಮೇಲೆ ನಿಗಾ ಇರಿಸಲಾಗಿದ್ದು, ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ತತ್ ಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆ. ಲಸಿಕೆ ಪಡೆದವರ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದ್ದು, ರಕ್ತ ಹೆಪ್ಪುಗಟ್ಟುವಿಕೆಯ ರಚನೆ ಕುರಿತು ವರದಿ ಮಾಡುವಂತೆ ಸೂಚಿಸಲಾಗಿದೆ ಎಂದು ಎಇಎಫ್‌ಐ ಸಮಿತಿಯ ಸಲಹೆಗಾರ ನರೇಂದ್ರ ಅರೋರಾ ಹೇಳಿದ್ದಾರೆ.
ಒಂದು ವೇಳೆ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ರಚನೆ ಕಂಡುಬಂದಲ್ಲಿ, ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ವರದಿ ಪಡೆದು ನಿರ್ಣಯಕೈಗೊಳ್ಳಲಾಗುತ್ತದೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ. ಇನ್ನು ಭಾರತದಲ್ಲಿ ಈ ವರೆಗೂ ಸುಮಾರು 2.63 ಕೋಟಿ ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, ಈ ಪೈಕಿ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ.