ತಿರುವನಂತಪುರ: ಮಹಿಳಾ ಆಯೋಗದಲ್ಲಿ ಪ್ರಸ್ತುತ 11,187 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. 46 ಶೇ. ಮಾತ್ರ ಪರಿಹಾರಗೊಂಡಿದೆ. ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೀನ್ 53,46,009 ರೂ.ಗಳನ್ನು ಗೌರವ ಧನವಾಗಿ ಪಡೆದಿರುವರೆಂದು ಆರ್‍ಟಿಐ ಪ್ರಕಾರ ಲಭ್ಯವಾದ ಮಾಹಿತಿಗಳಾಗಿವೆ. ನಾಲ್ವರು ಸದಸ್ಯರು ಸೇರಿದಂತೆ ಸಂಬಳಕ್ಕಾಗಿ 2,12,36,028 ರೂ.ಪಡೆಯಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದುಬಂದಿದೆ. ಕೆಪಿಸಿಸಿ ಕಾರ್ಯದರ್ಶಿ ಸಿ.ಆರ್. ಪ್ರಣಕುಮಾರ್ ಅವರಿಗೆ ಲಭಿಸಿದ ಮಾಹಿತಿ ಹಕ್ಕು ವರದಿಯಲ್ಲಿ ಇವಿಷ್ಟು ಬಹಿರಂಗಗೊಂಡಿದೆ.
ಆರ್‍ಟಿಐ ಪ್ರಕಾರ, ಮಹಿಳಾ ಆಯೋಗದಲ್ಲಿ 2017 ಮೇ 22 ರಿಂದ 2021 ರ ಫೆಬ್ರವರಿ 12 ರವರೆಗೆ 22,150 ಪ್ರಕರಣಗಳು ದಾಖಲಾಗಿದ್ದು, 10,263 ಪ್ರಕರಣಗಳು ಇತ್ಯರ್ಥಗೊಂಡಿದ್ದು, 11,187 ಪ್ರಕರಣಗಳು ಬಾಕಿ ಉಳಿದಿವೆ. ತಿರುವನಂತಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಯನಾಡದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.
ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫಿನ್ ಅವರು 2021 ರ ಫೆಬ್ರವರಿ 8 ರವರೆಗೆ ಗೌರವ ಧನ, ಟಿಎ, ದೂರವಾಣಿ ಶುಲ್ಕ, ತಜ್ಞರ ಶುಲ್ಕ ಮತ್ತು ವೈದ್ಯಕೀಯ ಮರುಪಾವತಿ ವಿಭಾಗಗಳಲ್ಲಿ 53,46,009 ರೂ. ಸರ್ಕಾರದಿಂದ ಹಣ ಪಡೆದುಕೊಂಡಿದ್ದಾರೆ. ಇದಲ್ಲದೆ ಸದಸ್ಯರಾದ ಇ.ಎಂ.ರಾಧಾ 41,70,929 ರೂ, ಎಂ.ಎಸ್.ತಾರಾ 39,42,284, ಶಾಹಿದಾ ಕಮಲ್ 38,89,123 ಮತ್ತು ಶಿಜಿ ಶಿವಾಜಿ 38,87,683 ರೂ.ಗಳನ್ನು ಪಡೆದುಕೊಂಡಿದ್ದಾರೆ. ಇಎಂ ರಾಧಾ ಮತ್ತು ಶಾಹಿದಾ ಕಮಲ್ ಅವರು ವೈದ್ಯಕೀಯ ಮರುಪಾವತಿ ಕುರಿತು ಯಾವುದೇ ಪಾವತಿಯನ್ನು ಸ್ವೀಕರಿಸಿಲ್ಲ.
ಸರ್ಕಾರಿ ಕಚೇರಿಗಳಲ್ಲಿ 100 ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. 38 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಎಡ ನೌಕರರ ವಿರುದ್ಧದ ಪ್ರಕರಣಗಳನ್ನು ಪರಿಗಣಿಸಿ ತೀರ್ಪು ನೀಡುವಲ್ಲಿ ಆಯೋಗದ ಕಡೆಯಿಂದ ಉದ್ದೇಶಪೂರ್ವಕ ನಿರ್ಲಕ್ಷ್ಯದ ಆರೋಪಗಳಿವೆ. ಪೋಲೀಸರ ವಿರುದ್ಧ ದಾಖಲಾದ 342 ಪ್ರಕರಣಗಳಲ್ಲಿ 116 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಡಿಎನ್‍ಎ ಪರೀಕ್ಷೆಗೆ ಸಂಬಂಧಿಸಿದ 29 ಪ್ರಕರಣಗಳಲ್ಲಿ 9 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.