ನವದೆಹಲಿ: ಸಾಮಾನ್ಯವಾಗಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳನ್ನು ಒಂದಕ್ಕೊಂದು ವಿರುದ್ಧವಾದ ಸಂಗತಿಗಳೆಂಬಂತೆ ಬಿಂಬಿಸಲಾಗುತ್ತದೆ. ಆದರೆ ಅಭಿವೃದ್ಧಿಯ 'ಪಥ'ದಲ್ಲೇ ಪರಿಸರವನ್ನು ಸಂರಕ್ಷಿಸಬಹುದು ಎಂಬುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿರೂಪಿಸುತ್ತಿದ್ದಾರೆ.
ರಾಷ್ಟ್ಯದ ರಾಜಧಾನಿ ನವದೆಹಲಿಯನ್ನು ಹರಿಯಾಣದ ಗುಡ್ಗಾವ್ಗೆ ಸೇರಿಸುವ 27.7 ಕಿಲೋಮೀಟರ್ ಉದ್ದದ ದೆಹಲಿ-ಗುಡಗಾವ್ ಎಕ್ಸ್ಪ್ರೆಸ್ವೇ, ಆರು ಲೇನ್ಗಳಿಂದ ಎಂಟು ಲೇನ್ಗಳನ್ನು ಹೊಂದಿದೆ. ಇಲ್ಲಿ ಇತ್ತೀಚೆಗೆ ನಡೆದ ರಸ್ತೆ ವಿಸ್ತರಣೆ ಕಾಮಗಾರಿಯ ಸಂದರ್ಭದಲ್ಲಿ ಮರಗಳನ್ನು ಕಡಿಯುವ ಬದಲು, ಬೇರೆ ಜಾಗಗಳಿಗೆ ಬೇರು ಸಮೇತ ಸ್ಥಳಾಂತರಿಸುವ ಕೆಲಸ ಮಾಡಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ಮರವನ್ನು ಬೇರುಸಮೇತ ತೆಗೆದು ಬೇರೆಡೆಗೆ ಸಾಗಿಸಿ ನೆಡುತ್ತಿರುವ ಕಾರ್ಯದ ವೀಡಿಯೋ ತುಣುಕನ್ನು ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ದೆಹಲಿ-ಗುಡಗಾವ್ ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿದ್ದ 12,000 ಮರಗಳನ್ನು ಬೇರೆ ಜಾಗಗಳಿಗೆ ಟ್ರಾನ್ಸ್ಪ್ಲಾಂಟ್ ಮಾಡಲಾಗಿದ್ದು, ಈ ಕಾರ್ಯದಲ್ಲಿ ಶೇ.84 ರಷ್ಟು ಯಶಸ್ಸಿನ ದರವನ್ನು ಸಾಧಿಸಲಾಗಿದೆ. ಹೀಗಾಗಿ ಈ ಹೆದ್ದಾರಿಯು, ಒಂದು 'ಗ್ರೀನ್ ಎಕ್ಸ್ಪ್ರೆಸ್ ಹೈವೇ' ಆಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.