ಸುಯೆಜ್: ಜಗತ್ತಿನಾದ್ಯಂತ ಕಳೆದೊಂದು ವಾರದಿಂದ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಸುಯೆಜ್ ಕಾಲುವೆಯ 'ಎವರ್ ಗಿವೆನ್' ಸರಕು ಸಾಗಾಣಿಕಾ ಬೋಟ್ ನ ಟ್ರಾಫಿಕ್ ಜಾಮ್ ನಿಂದಾಗಿ 1,30,000 ಕುರಿಗಳ ಜೀವಕ್ಕೆ ಕುತ್ತು ಎದುರಾಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಸುಯೆಜ್ ಕಾಲುವೆಯಲ್ಲಿ ಎವರ್ ಗಿವೆನ್ ಬೃಹತ್ ಹಡಗು ಸಿಲುಕಿ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿಂದಾಗಿ ಆದೇ ಮಾರ್ಗದಲ್ಲಿ ಸಾಗಬೇಕಿದ್ದ ಸುಮಾರು 1.30 ಲಕ್ಷ ಕುರಿಗಳನ್ನು ಹೊತ್ತಿದ್ದ 20 ಹಡಗುಗಲು ಸಮುದ್ರದಲ್ಲಿಯೇ ಲಂಗರು ಹಾಕಿದ್ದವು, ಇದರಿಂದ ಹಡಗಿನಲ್ಲಿದ್ದ ಕುರಿಗಳ ಜೀವಕ್ಕ ಅಪಾಯ ಎದುರಾಗಿತ್ತು. ಕುರಿ ಸಾಗಾಣಿಕೆ ವೇಳೆ ಅವುಗಳಿಗೆ ತಂದಿದ್ದ ಪಶು ಆಹಾರ ಮತ್ತು ನೀರು ಖಾಲಿಯಾಗತೊಡಗಿತ್ತು. ಒಂದು ವೇಳೆ ಇಂದು ಎವರ್ ಗಿವೆನ್ ಬೃಹತ್ ಹಡಗು ಮಾರ್ಗ ಕೊಡದೇ ಹೋಗಿದಿದ್ದರೆ ಈ 20 ಹಡಗಿನಲ್ಲಿದ್ದ ಸುಮಾರು 1.30 ಲಕ್ಷ ಕುರಿಗಳ ಜೀವಕ್ಕೆ ಅಪಾಯ ಎದುರಾಗಿರುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮಂಗಳವಾರ ಸುಯೆಜ್ ಕಾಲುವೆಯಲ್ಲಿ ಕೆಟ್ಟು ನಿಂತಿದ್ದ ಎವರ್ ಗಿವೆನ್ ಹಡಗು ಬಿರುಗಾಳಿ ಸಿಲುಕಿ ಸಮುದ್ರದಲ್ಲಿ ಅಡ್ಡಲಾಗಿ ತೇಲಿದ ಪರಿಣಾಮ ಹಡಗು ಕಾಲುವೆಯ ಮಧ್ಯದಲ್ಲಿ ಹಡಗಿನ ಎರಡು ಬದಿಗಳು ಸಿಲುಕಿಕೊಂಡವು. ಪರಿಣಾಮ ಸುಯೆಜ್ ಕಾಲುವೆಯಲ್ಲಿ ಸಂಪೂರ್ಣವಾಗಿ ಸಂಚಾರ ಸ್ಥಗಿತವಾಯಿತು.
ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗಬೇಕಿದ್ದ ಸುಮಾರು 450ಕ್ಕೂ ಹೆಚ್ಚು ಹಡಗಗಳು ತಾವಿದ್ದ ಜಾಗದಲ್ಲಿಯೇ ಲಂಗರು ಹಾಕಿ ನಿಂತವು. ಇದೇ ರೀತಿ ರೊಮೇನಿಯಾದಿಂದ ಸುಮಾರು 20 ಹಡಗುಗಳಲ್ಲಿ ಸುಮಾರು 1.30 ಲಕ್ಷ ಜೀವಂತ ಕುರಿಗಳನ್ನು ರವಾನೆ ಮಾಡಲಾಗಿತ್ತು. ಈ ಹಡಗುಗಳು ಕೂಡ ಸಮುದ್ರ ಮಾರ್ಗ ಮಧ್ಯೆಯೇ ಲಂಗರು ಹಾಕವಂತಾಗಿತ್ತು. ಆದರೆ ಇದರಿಂದ ಕಂಟೈನರ್ ಗಳಲ್ಲಿದ್ದ ಕುರಿಗಳ ಜೀವಕ್ಕೆ ಅಪಾಯ ಎದುರಾಗಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರೊಮೇನಿಯಾ ವಕ್ತಾರರು ಮುಂದಿನ 24 ಗಂಟೆಗಳಲ್ಲಿ ಎವರ್ ಗಿವೆನ್ ನಿಂದಾಗಿ ಉಂಟಾಗಿರುವ ಟ್ರಾಫಿಕ್ ಜಾಮ್ ಸಮಸ್ಯೆ ನೀಗದಿದ್ದರೆ, ಸುಮಾರು 1.30 ಲಕ್ಷ ಕುರಿಗಳ ಜೀವಕ್ಕೆ ಅಪಾಯ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಈ ಹಿಂದೆ ಅನಿಮಲ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಕೂಡ ಜಗತ್ತಿನ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಹಡುಗಳಲ್ಲಿರುವ ಜಾನುವಾರುಗಳ ಮೇವು ಖಾಲಿಯಾಗುತ್ತಾ ಸಾಗಿದ್ದು, ಸುಯೆಜ್ ಕಾಲುವೆ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಕಂಟೈನರ್ ಗಳಲ್ಲಿರುವ ಕುರಿಗಳು ಅಲ್ಲಿಯೇ ಸಾವನ್ನಪ್ಪುತ್ತವೆ ಎಂದು ಕಳವಳ ವ್ಯಕ್ತಪಡಿಸಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಸರ್ಕಾರೇತರ ಸಂಸ್ಥೆಯ ವಕ್ತಾರ ಗೇಬ್ರಿಯಲ್ ಪಾಲ್ ಅವರು, ನಾವು ಒಂದು ದೊಡ್ಡ ದುರಂತದ ಮುಂದೆ ಕುಳಿತಿದ್ದೇವೆ. ಮುಂದಿನ 24 ಗಂಟೆಗಳಲ್ಲಿ ಸುಯೆಜ್ ಕಾಲುವೆಯಲ್ಲಿನ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿರುವ ಜಾನುವಾರು ಸಾಗಾಣಿಕಾ ಹಡುಗುಗಳಲ್ಲಿ ನೀರು ಮತ್ತು ಮೇವಿನ ಕೊರತೆ ಎದುರಾಗಲಿದೆ. ಇದರಿಂದ ಹಡಗುಗಳಲ್ಲಿರುವ ಲಕ್ಷಾಂತರ ಪ್ರಾಣಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಕೇವಲ ರೊಮೇನಿಯಾ ಮಾತ್ರವಲ್ಲದೇ, ಸ್ಪೇನ್ ದೇಶದ ಜಾನುವಾರು ಸಾಗಾಣಿಕಾ ಹಡುಗುಗಳು ಕೂಡ ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದವು ಎನ್ನಲಾಗಿದೆ.
ಜಾನುವಾರು ಸಾಗಾಣಿಕಾ ಹಡಗುಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದ್ದ ಸ್ಪೇನ್ ಮತ್ತು ಸೌದಿ ಅರೇಬಿಯಾ
ಸುಯೆಜ್ ಕಾಲುವೆ ಟ್ರಾಫಿಕ್ ಜಾಮ್ ತೆರವಾಗುವವರೆಗೂ ಹೊಸ ಜಾನುವಾರು ಸಾಗಾಣಿಕಾ ಹಡಗುಗಳ ಸಂಚಾರ ಬೇಡ ಎಂದು ಸ್ಪೇನ್ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ತಾತ್ಕಾಲಿಕ ನಿರ್ಬಂಧ ಹೇರಿದ್ದವು. ಸೌದಿ ಮತ್ತು ಸ್ಪೇನ್ ನಿಂದ ಜೋರ್ಡಾನ್ ಗೆ ಜಾನುವಾರು ಸಾಕಾಣಿಕಾ ಹಡಗುಗಳು ಸಾಗಾಟ ನಡೆಸುತ್ತಿದ್ದವು.
ಈ ಹಿಂದೆ 2020 ರಲ್ಲಿ ಕಪ್ಪು ಸಮುದ್ರದಲ್ಲಿ ಇದೇ ರೀತಿಯ ಜಾನುವಾರು ಸಾಗಾಣಿಕಾ ಹಡುಗೊಂದು ದುರಂತಕ್ಕೀಡಾಗಿ ಮುಳುಗಡೆಯಾಗುತ್ತಿದ್ದ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ನಡೆಸಿ ಸಾವಿರಾರು ಕುರಿಗಳನ್ನು ರಕ್ಷಿಸಲಾಗಿತ್ತು.