ನವದೆಹಲಿ: ಕೇಂದ್ರ ತಜ್ಞರ ತಂಡ ಕೊರೊನಾ ಸೋಂಕಿನ ಕುರಿತು ಇದುವರೆಗೂ ನಡೆಸಿರುವ ವಿಶ್ಲೇಷಣೆ ಪ್ರಕಾರ 0 ರಿಂದ 14 ವಯಸ್ಸಿನ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗುವ ಪ್ರಮಾಣ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ತಿಳಿಸಿದ್ದಾರೆ.
ಈ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಸೋಂಕಿನ ಗಂಭೀರ ಪರಿಣಾಮ ಪತ್ತೆಯಾಗಿಲ್ಲ. ಹೆಚ್ಚಿನ ಮಕ್ಕಳಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಈ ವಯಸ್ಸಿನ ಮಕ್ಕಳ ಮೇಲೆ ಸೋಂಕಿನ ದುಷ್ಪರಿಣಾಮ ತಗ್ಗಿಸುವ ಸಂಬಂಧ ಪ್ರಸ್ತುತ ನಿರ್ದಿಷ್ಟ ಕ್ರಿಯಾಯೋಜನೆಯನ್ನು ರೂಪಿಸಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಕೊರೊನಾ ನಿಯಮಗಳನ್ನು ಪಾಲಿಸುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈಚೆಗಷ್ಟೆ ಅಮೆರಿಕ ಮೂಲದ ಮಾಡೆರ್ನಾ, ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಆರಂಭಿಸಿರುವುದಾಗಿ ತಿಳಿಸಿತ್ತು. 6 ತಿಂಗಳಿಂದ 12 ವರ್ಷದ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಯುತ್ತಿದೆ ಎಂದು ಸಿಇಒ ಸ್ಟೀಫನ್ ತಿಳಿಸಿದ್ದರು. ಭಾರತದಲ್ಲಿ ಸದ್ಯಕ್ಕೆ ಮಕ್ಕಳಿಗೆ ನೀಡಲಾಗುವ ಲಸಿಕೆ ಕುರಿತು ಯಾವುದೇ ಪ್ರಯೋಗ ನಡೆಯುತ್ತಿಲ್ಲ.