ನವದೆಹಲಿ: ಹದಿನೈದು ವರ್ಷಗಳಿಗಿಂತ ಹೆಚ್ಚು ಹಳೆಯ ಕಾರಿನ ನೋಂದಣಿಯನ್ನು ನವೀಕರಣಗೊಳಿಸಲು ನಾವು ಅಕ್ಟೋಬರ್‌ನಿಂದ 5,000 ರೂಪಾಯಿಗಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಇದು ನಾವು ಸಾಮಾನ್ಯವಾಗಿ ನೋಂದಣಿ ನವೀಕರಣಕ್ಕೆ ಪಾವತಿಸುವ ಶುಲ್ಕಕ್ಕಿಂತ 8 ಪಟ್ಟು ಹೆಚ್ಚಾಗಿದೆ.
ಇದೇ ರೀತಿ ಹಳೆಯ ಬೈಕ್‌ನ ನೋಂದಣಿ ನವೀಕರಿಸಲು 1,000 ಶುಲ್ಕ ಪಾವತಿಸಬೇಕು. ಪ್ರಸ್ತುತ ಈ ಶುಲ್ಕ 300 ರೂಪಾಯಿ. 15 ವರ್ಷ ಮೀರಿದ ಬಸ್ ಅಥವಾ ಟ್ರಕ್‌ನ ಸುಸ್ಥಿತಿ ನವೀಕರಣ ಪ್ರಮಾಣಪತ್ರದ ನವೀಕರಣಕ್ಕೆ 12,500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಈಗ ಪಾವತಿಸುವ ಶುಲ್ಕಕ್ಕಿಂತ ಸುಮಾರು 21 ಪಟ್ಟು ಅಧಿಕ.
15 ವರ್ಷಗಳಿಗಿಂತ ಹಿಂದಿನ ವಾಹನವನ್ನು ಗುಜರಿಗೆ ಹಾಕುವ ನೀತಿಯನ್ನು ಜಾರಿಗೊಳಿಸುವ ಯೋಜನೆಯ ಭಾಗವಾಗಿ ಈ ಶುಲ್ಕ ಏರಿಕೆಯನ್ನು ಪ್ರಸ್ತಾವಿಸಿ ರಸ್ತೆ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ. ನೂತನ ಪ್ರಸ್ತಾವದ ಪ್ರಕಾರ ಖಾಸಗಿ ವಾಹನಗಳ ನೋಂದಣಿ ನವೀಕರಣ ವಿಳಂಬಕ್ಕೆ ಪ್ರತಿ ತಿಂಗಳಿಗೆ 300 ರೂಪಾಯಿಯಿಂದ 500 ರೂಪಾಯಿ ದಂಡ. ವಾಣಿಜ್ಯ ವಾಹನಗಳ ಸುಸ್ಥಿತಿ ಪ್ರಮಾಣಪತ್ರ ನವೀಕರಣ ವಿಳಂಬಕ್ಕೆ ಪ್ರತಿ ದಿನ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ವೈಯುಕ್ತಿಕ ವಾಹನಗಳ ನೂತನ ನೋಂದಣಿ ಹಾಗೂ ನವೀಕರಣದ ಪ್ರಸ್ತಾವಿತ ಶುಲ್ಕ
ವಾಹನಗಳ ಮಾದರಿ ನೋಂದಣಿ ಶುಲ್ಕ ನವೀಕರಣ ಶುಲ್ಕ
ಮೋಟಾರು ಸೈಕಲ್ - 300 ರೂ. - 1,000 ರೂ.
ತ್ರಿಚಕ್ರ ಹಾಗೂ ಚತುಶ್ಚಕ್ರ - 600 ರೂ. - 2,500 ರೂ.
ಎಲ್‌ಎಂವಿ (ಕಾರ್/ಜೀಪ್) - 600 ರೂ. - 5000 ರೂ.
ಆಮದು ವಾಹನ
(ಕಾರು ಹಾಗೂ ಅದಕ್ಕಿಂತ ಮೇಲಿನ)- 5,000 ರೂ. - 40,000
ಹೊಸ ಸುಸ್ಥಿತಿ ಪ್ರಮಾಣಪತ್ರ ಹಾಗೂ ನವೀಕರಣದ ಪ್ರಸ್ತಾವಿತ ಶುಲ್ಕ
ವಾಹನಗಳ ಮಾದರಿ ನೂತನ ಸುಸ್ಥಿತಿ ಪ್ರಮಾಣ ಪತ್ರ ನವೀಕರಣ
ಮೋಟಾರು ಸೈಕಲ್ - 500 ರೂ. 1,000 ರೂ.
ತ್ರಿಚಕ್ರ/ಚತುಶ್ಚಕ್ರ - 1,000 3,500
ಟ್ಯಾಕ್ಸಿ/ ಕ್ಯಾಬ್ - 1,000 7,000
ಮಧ್ಯಮ ಗೂಡ್ಸ್/ ಪ್ಯಾಸೆಂಜರ್ -1,300 10,000
ಭಾರೀ ಗೂಡ್ಸ್, ಪ್ಯಾಸೆಂಜರ್ - 1,500 12,000