ನವದೆಹಲಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ವಯಸ್ಕ ಆರೋಪಿಯ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸಬೇಕು ಎಂದು ಉನ್ನತಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
2017ರಲ್ಲಿ ಪೋಸ್ಕೊ ಅಡಿಯಲ್ಲಿ 32,608 ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಈ ಪ್ರಮಾಣ 47,325ಕ್ಕೆ (ಶೇ. 45) ಏರಿಕೆ ಆಗಿದೆ. ಆದ್ದರಿಂದ ವಯೋಮಿತಿಯನ್ನು ಪುನರ್ ಪರಿಶೀಲಿಸುವ ಮತ್ತು ಸೈಬರ್ ಅಪರಾಧ ಎಸಗುವವರ ವಯಸ್ಸನ್ನು ಪುನರ್ ವಿಮಶಿಸಬೇಕಿದೆ ಎಂದು ಸಮಿತಿ ಶಿಫಾರಸು ಮಾಡಿದೆ.
ಪ್ರಸ್ತುತದ ಕಾನೂನಿನಲ್ಲಿ ಸಾಮಾನ್ಯ ಪ್ರಕರಣಗಳಲ್ಲಿ 16ರಿಂದ 18 ವರ್ಷದ ಆರೋಪಿಗಳನ್ನು ಬಾಲನ್ಯಾಯ ಕಾಯ್ದೆ ಅಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಕೊಲೆ ಅಥವಾ ಅತ್ಯಾಚಾರದಂತಹ ಹೀನಕೃತ್ಯ ದಲ್ಲಿ ಭಾಗಿಯಾದ 16 ವರ್ಷದ ಆರೋಪಿಗಳನ್ನು ವಯಸ್ಕರ ಕಾನೂನಿನಡಿಯಲ್ಲೇ ವಿಚಾರಣೆ ನಡೆಸಬೇಕು ಎಂದು 2015ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ, ಲೈಂಗಿಕ ದೌರ್ಜನ್ಯ ಎಸಗುವ ಹದಿಹರೆಯದ ಆರೋಪಿಗಳನ್ನು ಕಠಿಣ ಕಾನೂನಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.