ಕಾಸರಗೋಡು: ವಿಧಾನಸಭೆ ಚುನಾವಣೆಯ ಪ್ರತಿ ಹಂತಗಳನ್ನು ದಾಖಲಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 172 ಮಂದಿ ವೀಡಿಯೋಗ್ರಾಫರ್ ಗಳು ಸಕ್ರಿಯರಾಗಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ ಸಜ್ಜೀಕರಣ, ಮತಗಟ್ಟೆಯ ಸಿಬ್ಬಂದಿ, ಚುನಾವಣೆ ಅಧಿಕಾರಿಗಳ ತರಬೇತಿ, ಚುನಾವಣೆ ನಿರೀಕ್ಷಕರ ವಿಶೇಷ ಸಭೆಗಳು, ಚುನಾವಣೆ ಸಾಮಾಗ್ರಿಗಳ ವಿತರಣೆ- ಸ್ವೀಕಾರ ಕೇಂದ್ರಗಳ ಪೂರ್ವಾವಧಿ ಚಟುವಟಿಕೆಗಳು, ಸಮಸ್ಯಾತ್ಮಕ ಮತಗಟ್ಟೆಗಳ ಚಟುವಟಿಕೆಗಳು, ವಿವಿಧ ಸ್ಕ್ವಾಡ್ ಗಳ ಚಟುವಟಿಕೆಗಳು, ಮತಗಟ್ಟೆಗಳ ಕ್ರಮಗಳು ಇತ್ಯಾದಿ ಚುನಾವಣೆ ಸಂಬಂಧ ವಿವಿಧ ಹಂತಗಳ ಚಿತ್ರೀಕರಣ ಮತ್ತು ದಾಖಲೀಕರಣ ನಡೆಸುವ ನಿಟ್ಟಿನಲ್ಲಿ ಇವರ ಚಟುವಟಿಕೆ ನಡೆಯುತ್ತಿದೆ.
ಚುನಾವಣೆ ಘೋಷಣೆ ಆದೇಶ ಜಾರಿಗೊಂಡ ನಂತರ ಇವರ ಚಟುವಟಿಕೆಗಳೂ ಆರಂಭಗೊಂಡಿದೆ. ಇವರಲ್ಲಿ 20 ಮಂದಿ ಸ್ಟಾಟಿಕ್ ಸರ್ವೆಲೆನ್ಸ್ ತಂಡದ ವ್ಯಾಪ್ತಿಯಲ್ಲೂ, 16 ಮಂದಿ ಕ್ಷಿಪ್ರದಳ(ಫ್ಲಯಿಂಗ್ ಸ್ಕ್ವಾಡ್) ವ್ಯಾಪ್ತಿಯಲ್ಲೂ, 5 ಮಂದಿ ಆಂಟಿ ಡಿಫೇಸ್ ಮೆಂಟ್ ಸ್ಕ್ಕಾಡ್ ವ್ಯಾಪ್ತಿಯಲ್ಲೂ, 5 ಮಂದಿ ಸರ್ವೆಲೆನ್ಸ್ ತಂಡದ ವ್ಯಾಪ್ತಿಯಲ್ಲೂ, ಇಬ್ಬರು ಜಿಲ್ಲಾಧಿಕಾರಿ ಕಚೇರಿಯ ಚಟುವಟಿಕೆ ವ್ಯಾಪ್ತಿಯಲ್ಲೂ, 125 ಮಂದಿ ಆಬ್ಸೆಂಟೀಸ್ ಮತದಾತರ ಮತ ಅಂಚೆ ವಿತರಣೆ ನಡೆಸುವ ತಂಡಗಳ ವ್ಯಾಪ್ತಿಯಲ್ಲೂ ನೇಮಕಗೊಂಡು ಕರ್ತವ್ಯದಲ್ಲಿದ್ದಾರೆ.