ನವದೆಹಲಿ: ಭಾರತದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 56,211 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಹೊಸ ಸೋಂಕಿತರ ಸಂಖ್ಯೆ ಸತತ ಏರುಗತಿಯಲ್ಲಿ ಇರುವ ಪರಿಣಾಮ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,20,95,855ಕ್ಕೆ ಏರಿಕೆಯಾಗಿದೆ.
1,20,95,855 ಮಂದಿ ಒಟ್ಟಾರೆ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 37,028 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 1,13,93,021ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,40,720ಕ್ಕೆ ತಲುಪಿದೆ.
ಈ ಮಧ್ಯೆ ಗುರುವಾರ ಒಂದೇ ದಿನ 271 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,62,114ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಒಂದೇ ದಿನ 7,85,864 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 24,26,50,025 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ ಹಿರಿಯ ನಾಗರೀಕರಿಗೆ ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೂ ಲಸಿಕೆ ನೀಡಲಾಗುತ್ತಿದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 6,11,13,354 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.