ನವದೆಹಲಿ: ದೇಶದಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಗಣನೀಯವಾಗಿ ಏರಿಕೆಯಾಗಿದ್ದು, ಮಾರ್ಚ್ 18ರಂದು ಒಂದೇ ದಿನ 400 ರೂಪಾಂತರಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ದೇಶದಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 795ಕ್ಕೆ ಏರಿಕೆಯಾಗಿದೆ. ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ಪತ್ತೆಯಾಗಿರುವ SARS-CoV-2 ವೈರಸ್ ಮಾದರಿ ದೇಶದಲ್ಲೂ ಪತ್ತೆಯಾಗಿದೆ. ಈ ಮಾದರಿ ಸೋಂಕಿತರ ಸಂಖ್ಯೆ ಇದೀಗ 795ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು, ದೇಶದಲ್ಲಿ ಈ ವರೆಗೂ ಯಾವುದೇ ರೀತಿಯ ರೂಪಾಂತರಿ ಕೊರೋನಾ ವೈರಸ್ ಮರು ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ ವಿಶ್ವದ ಮೂರು ರಾಷ್ಟ್ರಗಳಲ್ಲಿ ಅಂದರೆ ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ಪತ್ತೆಯಾದ ಕೊರೋನಾ ವೈರಸ್ ತಳಿಯಿಂದ ಮರು ಸೋಂಕು ಸಾಧ್ಯತೆ ಹೆಚ್ಚಾಗಿದೆ. ಮೊದಲ ಸೋಂಕಿಗಿಂತ ಎರಡನೇ ಬಾರಿಗೆ ತಗುಲುವ ಸೋಂಕು ಹೆಚ್ಚು ಮಾರಣಾಂತಿಕವಾಗಿರುತ್ತದೆ ಎಂದು ಲಿಖಿತ ಉತ್ತರದಲ್ಲಿ ಹೇಳಲಾಗಿದೆ.
ಪ್ರಸ್ತುತ ದೇಶದಲ್ಲಿರುವ 10 ಲ್ಯಾಬ್ ಗಳಲ್ಲಿ ರೂಪಾಂತರಿ ವೈರಸ್ ಪತ್ತೆ ಮಾಡುವ ಜೆನೋಮಿಕ್ ಕಾನ್ಸೋರ್ಟಿಯಂ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಲ್ಯಾಬ್ ಗಳು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧೀನದಲ್ಲಿ ಕೆಲಸ ಮಾಡುತ್ತಿವೆ ಎನ್ನಲಾಗಿದೆ.