ನವದೆಹಲಿ: ಕೆಲ ರಾಜ್ಯಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದ ಒಟ್ಟಾರೆ ಸೋಂಕಿತರ ಪೈಕಿ ಕೇವಲ 6 ರಾಜ್ಯಗಳಲ್ಲಿ ಶೇ.85.51ರಷ್ಟು ಸೋಂಕಿತರು ಇದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ.
ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕೋವಿಡ್ ಆರ್ಭಟ ಗಣನೀಯವಾಗಿ ಉಲ್ಬಣಗೊಳ್ಳುತ್ತಿವೆ. ಭಾರತದಲ್ಲಿ ಒಟ್ಟು 1,73,413 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ 1,11,56,923ಕ್ಕೆ ಏರಿಕೆಯಾಗಿದೆ.
ಆರು ರಾಜ್ಯಗಳು ಅಂದರೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ನಲ್ಲಿ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 9,855 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಅದರ ನಂತರ ಕೇರಳದಲ್ಲಿ 2,765 ಹೊಸ ಪ್ರಕರಣಗಳು ಮತ್ತು ಪಂಜಾಬ್‌ನಲ್ಲಿ 772 ಹೊಸ ಪ್ರಕರಣಗಳು ದಾಖಲಾಗಿವೆ.
ಈ ನಡುವೆ ದೇಶದಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ ಹಾಗೂ ಬ್ರಿಜೆಲ್ ರಾಷ್ಟ್ರಗಳಲ್ಲಿ ಕಂಡು ಬಂದಿರುವ ರೂಪಾಂತರಿ ಕೊರೋನಾ ಪ್ರಕರಣಗಳ ಸಂಖ್ಯೆ 242ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 17,407ಹೊಸ ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ ಆರು ರಾಜ್ಯಗಳ ಪಾಲೇ ಶೇ.85.51ರಷ್ಟಾಗಿವೆ. 6 ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಮೇಲ್ಮುಖವಾಗಿ ಪಥದಲ್ಲಿ ಸಾಗಿದೆ.
ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 89 ಮಂದಿ ಸಾವನ್ನಪ್ಪಿದ್ದು, ಮಹಾರಾಷ್ಟ್ರ ಒಂದು ರಾಜ್ಯದಲ್ಲಿಯೇ 42 ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಕೇರಳದಲ್ಲಿ 15, ಪಂಜಾಬ್ ನಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ.
ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗೋವಾ, ಉತ್ತರಾಖಂಡ್, ಜಾರ್ಖಂಡ್, ಪುದುಚೇರಿ, ಅಸ್ಸಾಂ, ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ಲಡಾಖ್, ತ್ರಿಪುರ, ಅಂಡಾಮನ್ ನಿಕೋಬಾರ್ ಮಣಿಪುರ, ಮಿಜೋರಾಮ್, ಮೇಘಾಲಯ, ಡಮನ್, ಡಿಯು ಮತ್ತು ದಾದ್ರಾ, ನಗರ ಹವೇರಿ ಮತ್ತು ಅರುಣಾಚಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದ ಎಂದು ಹೇಳಲಾಗಿದೆ.
ಇನ್ನು ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಯ ವೇಗವನ್ನೂ ಹೆಚ್ಚಳ ಮಾಡಲಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 1,66,16,048 ಮಂದಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 3,23,064 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ.
ಮೊದಲ ಡೋಸ್ ನೀಡಲಾದ 67,90,808 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯು), ಎಚ್‌ಸಿಡಬ್ಲ್ಯೂ ಕಾರ್ಯಕರ್ತರಿಗೆ 28,72,725 ಎರಡನೇ ಡೋಸ್ ಮತ್ತು 58,03,856 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ.