ಬೆಂಗಳೂರು: ಮಕ್ಕಳಿಗೆ ಕೋವಿಡ್-19 ಲಸಿಕೆ ಟ್ರಯಲ್ ಗಳನ್ನು ಪ್ರಾರಂಭಿಸುವುದರ ಬಗ್ಗೆ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಭಾರತೀಯ ವೈದ್ಯಕೀಯ ಸಂಘದ ಸ್ಥಾಯಿ ಸಮಿತಿಯಲ್ಲಿ ಮಹತ್ವದ ಚರ್ಚೆ ನಡೆದಿದೆ.
12 ವರ್ಷಕ್ಕಿಂತ ಕಿರಿಯ ಮಕ್ಕಳ ಆರೋಗ್ಯ ಮುಖ್ಯವಾಗಿರುವುದರಿಂದ ಪ್ರತ್ಯೇಕವಾಗಿ ಅವರಿಗೆ ಲಸಿಕೆ ಟ್ರಯಲ್ ನಡೆಸುವುದು ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.
ಜೀವಕೋಶಕ್ಕೆ ಸೋಂಕನ್ನು ಹರಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ Ace2 ರಿಸೆಪ್ಟರ್ ಗಳು ಕಡಿಮೆ ಇರುವುದು ಹಾಗೂ ಶ್ವಾಸಕೋಶಕ್ಕೆ ತಗುಲುವ ಪ್ರಮಾಣ ಕಡಿಮೆ ಇರುವುದರಿಂದ ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಆದರೂ ಅವರಿಗೆ ಚರ್ಮದ ದದ್ದುಗಳು, ಜ್ವರ, ಕೀಲು ನೋವು, ಕೀಲು ಊತ, ಮಲ್ಟಿ ಸಿಸ್ಟಮ್ ಇನ್ಲ್ಫಾಮೆಟ್ರಿ ಸಿಂಡ್ರೋಮ್ (ಎಂಐಎಸ್-ಸಿ), ಕವಾಸಾಕಿ ಸಿಂಡ್ರೋಂ ಗಳು ಮಕ್ಕಳಲ್ಲಿಯೂ ಕಂಡುಬರುತ್ತದೆ ಎನ್ನುತ್ತಾರೆ ಡಾ. ಶ್ರೀನಿವಾಸ
ಹೊಸ ಲಸಿಕೆಗಳಲ್ಲಿ, ಮಕ್ಕಳಿಗೆ ನೀಡುವುದಕ್ಕೂ ಮೊದಲು ಅದನ್ನು ವಯಸ್ಕರಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತ್ಯೇಕ ಲಸಿಕೆಗಾಗಿ ವಿಶ್ವಾದ್ಯಂತ 6 ವರ್ಷದಷ್ಟು ಸಣ್ಣ ಮಕ್ಕಳಿಗೆ ಸಂಬಂಧಿಸಿದಂತೆ ಕ್ಲಿನಿಕಲ್ ಟ್ರಯಲ್ ಗಳು ನಡೆಯುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ವರೆಗೂ 12 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಕೋವಿಡ್ ಲಸಿಕೆ ಟ್ರಯಲ್ ಗಳು ನಡೆದಿಲ್ಲ. ಆದರೆ ಹಿರಿಯರಿಗೆ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವುದು ಹಾಗೂ ಆ ಮೂಲಕ ಹರ್ಡ್ ಇಮ್ಯುನಿಟಿ ಉಂಟಾಗುವಂತೆ ಮಾಡಿ ಮಕ್ಕಳಿಗೆ ಹರಡದಂತೆ ತಡೆಯಲಾಗುತ್ತಿದೆ ಎಂದು ಬೆಂಗಳೂರು ಪೀಡಿಯಾಟ್ರಿಕ್ ಸೊಸೈಟಿ ಯ ಕಾರ್ಯನಿರ್ವಾಹಕ ಸದಸ್ಯ ಮತ್ತು ಆಸ್ಟರ್ ಸಿಎಮ್ಐ ಆಸ್ಪತ್ರೆಯ ಮಕ್ಕಳ ನರವಿಜ್ಞಾನ ಸಲಹೆಗಾರ . ಡಾ. ರವಿ ಕುಮಾರ್ ಹೇಳಿದ್ದಾರೆ.
ಕಾನೂನಾತ್ಮಕವಾಗಿ 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಯಸ್ಕರೆಂದು ಗುರುತಿಸಲಾಗುತ್ತಿದ್ದು, ಮಕ್ಕಳೆಂದು ಗುರುತಿಸುವ ಮಾನದಂಡ ಇದೊಂದೇ ಆಗಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ವೈದ್ಯ ಸಮೂಹದಲ್ಲಿ ಕೇಳಿಬಂದಿದೆ.