ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ವು ಕಠಿಣ ಎಚ್ಚರಿಕೆಗಳನ್ನು ನೀಡಿದೆ.
ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ನಾಗರೀಕ ವಿಮಾಯಾನ ನಿರ್ದೇಶನಾಲಯವು, ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಪ್ರವೇಶವನ್ನು ನಿರಾಕರಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಕೋವಿಡ್-19 ಶಿಷ್ಟಾಚಾರದ ಪ್ರಕಾರ ಪ್ರಯಾಣಿಕರು ಮಾಸ್ಕ್ ಧರಿಸದೇ ಇರುವುದು, ಮೂಗಿನ ಕೆಳಗೆ ಹಾಕಿ ಕೊಂಡು ಸರಿಯಾಗಿ ಮಾಸ್ಕ್ ಧರಿಸದೇ ಇದ್ದರೆ ಅದನ್ನು ಅಶಿಸ್ತು ಎಂದು ಪರಿಗಣಿಸುವಂತೆಯೂ ಸೂಚನೆ ನೀಡಿದೆ.
ಒಂದು ವೇಳೆ ಯಾವುದೇ ಪ್ರಯಾಣಿಕ ಕೋವಿಡ್ 19 ಶಿಷ್ಟಾಚಾರ(ಸರಿಯಾಗಿ ಮಾಸ್ಕ್ ಧರಿಸದೇ ಇರುವುದು, ಸುರಕ್ಷಿತ ಅಂತರ ನಿಯಮ ಪಾಲಿಸದೇ ಇರುವುದು ಸೇರಿದಂತೆ)ಪಾಲಿಸದೇ ಇದ್ದರೆ ಅವರಿಗೆ ಸೂಕ್ತ ಎಚ್ಚರಿಕೆಗಳನ್ನು ನೀಡಬೇಕು, ಎಚ್ಚರಿಕೆ ಬಳಿಕವೂ ಪ್ರಯಾಣಿಕರು ಪದೇ ಪದೇ ತಪ್ಪನ್ನು ಪುನರಾವರ್ತಿಸಿದರೆ ಅಂತಹ ಪ್ರಯಾಣಿಕರ ವಿಮಾನಯಾನದ ಮೇಲೆ ಖಾಯಂ ಆಗಿ ನಿರ್ಬಂಧ ವಿಧಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಡಿಜಿಸಿಎ ಸುತ್ತೋಲೆಯಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ...
ವಿಮಾನ ಪ್ರಯಾಣದ ಸಮಯದಲ್ಲಿ ಮುಖವಾಡ ಧರಿಸುವುದು, ಸಾಮಾಜಿಕ ದೂರವನ್ನು ಅನುಸರಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಮಾಸ್ಕ್ ಗಳನ್ನು ಮೂಗಿನ ಕೆಳಗೆ ಇಳಿಸಬಾರದು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶದ ಸಮಯದಲ್ಲಿ, ಸಿಐಎಸ್‌ಎಫ್ ಅಥವಾ ಇತರ ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ನೊಂದಿಗೆ ವಿಮಾನ ನಿಲ್ದಾಣದ ಒಳಗೆ ಯಾತ್ರಿಗಳ ಪ್ರವೇಶವನ್ನು ಸುನಿಶ್ಚಿತಗೊಳಿಸಲಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಯಾತ್ರಿಗಳು ಸರಿಯಾಗಿ ಮಾಸ್ಕ್ ಧರಿಸಿದ್ದಾರೆಯೇ ಮತ್ತು ಅವರು ಸರಿಯಾದ ರೀತಿಯಲ್ಲಿ ಸಾಮಾಜಿಕ ಅಂತರ ನಿಯಮ ಅನುಸರುಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ವಿಮಾನ ನಿಲ್ದಾಣದ ನಿರ್ದೇಶಕರು/ಟರ್ಮಿನಲ್ ಮ್ಯಾನೇಜರ್ ಗಳು ಖಾತರಿಪಡಿಸಲಿದ್ದಾರೆ. ಪ್ರಯಾಣಿಕನು ವಿಮಾನ ನಿಲ್ದಾಣದ ಆವರಣದಲ್ಲಿ ಅಥವಾ ವಿಮಾನದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸದಿದ್ದರೆ, ಅವನಿಗೆ ಎಚ್ಚರಿಕೆ ನೀಡಲಾಗುವುದು. ಜೊತೆಗೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಜರುಗಿಸಲಾಗುವ ಸಾಧ್ಯತೆ ಇದೆ ಎಂದೂ ಕೂಡ ಸುತ್ತೋಲೆಯಲ್ಲಿ ತಿಳಿಸಲಾಗಿದೆ.ಡಿಪಾರ್ಚರ್ ಗೂ ಮೊದಲು ವಿಮಾನದಲ್ಲಿ ಕುಳಿತ ಪ್ರಯಾಣಿಕ ಒಂದು ವೇಳೆ ಎಚ್ಚರಿಕೆಯ ಬಳಿಕವೂ ಕೂಡ ಸರಿಯಾಗಿ ಮಾಸ್ಕ್ ಧರಿಸದೆ ಹೋದಲ್ಲಿ ಆತನನ್ನು ವಿಮಾನದಿಂದ ಕೆಳಗಿಳಿಸಲಾಗುವುದು.ಪ್ರಯಾಣದ ವೇಳೆ ಒಂದು ವೇಳೆ ಪ್ರಯಾಣಿಕ ಪದೇ ಪದೇ ಮಾಸ್ಕ್ ಧರಿಸಲು ನಿರಾಕರಿಸಿದರೆ, ಕೋವಿಡ್ ಪ್ರೋಟೋಕಾಲ್ ಅನುಸರಿಸದೆ ಹೋದಲ್ಲಿ ಆತನನ್ನು 'ಅಶಿಸ್ತಿನ ಪ್ರಯಾಣಿಕ' ಎಂಬ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಈ ಪಟ್ಟಿಯಲ್ಲಿ ಸೇರಿರುವ ಯಾತ್ರಿಗಳ ವಿಮಾನ ಪ್ರವಾಸದ ಮೇಲೆ ಖಾಯಂ ನಿರ್ಬಂಧ ವಿಧಿಸಲಾಗುವ ಸಾಧ್ಯತೆಯೂ ಇದೆ. ಹೊಸ ಮಾರ್ಗಸೂಚಿಯ ಪ್ರಕಾರ ಈ ನಿಯಮಗಳು 6 ತಿಂಗಳ ಅವಧಿಯಿಂದ ಹಿಡಿದು 1 ಅಥವಾ 2 ವರ್ಷಗಳ ಅವಧಿಯವರೆಗೂ ಇರುವ ಸಾಧ್ಯತೆ ಇದೆ.