ನವದೆಹಲಿ: ಅತ್ತ ಗಡಿಯಲ್ಲಿ ಭಾರತವನ್ನು ಎದುರಿಸಲಾಗದೇ ಇದ್ದದ್ದಕ್ಕೆ ಹತಾಶಗೊಂಡ ಚೀನಾ ಭಾರತದ ವಿರುದ್ಧ ಸೈಬರ್ ದಾಳಿಗೆ ಮುಂದಾಗಿತ್ತಾ? ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳಿಂದ ಮೂಡಿದೆ.
ಒಂದೆಡೆ ಗಡಿಯಲ್ಲಿ ಪ್ರಕ್ಷುಬ್ಧತೆ ಮತ್ತೊಂದೆಡೆ ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್ ಗಳು ಭಾರತದ ಪವರ್ ಗ್ರಿಡ್ ಗಳು ಹಾಗೂ ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ ಹಾಗೂ ಭಾರತ್ ಬಯೋಟೆಕ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಅಮೆರಿಕದ ಸೈಬರ್ ಭದ್ರತಾ ಸಂಸ್ಥೆ ಸೈಫಿರ್ಮಾ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂ ಯಾರ್ಕ್ ಟೈಮ್ಸ್ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದ ನಡುವೆಯೂ ಭಾರತದ ಪವರ್ ಗ್ರಿಡ್ ಗಳು ಹಾಗೂ ಪೋರ್ಟ್ ಗಳನ್ನು ಚೀನಾ ಸರ್ಕಾರಿ ಸ್ವಾಮ್ಯದ ಹ್ಯಾಕರ್ ಗಳು ಮಾಲ್ವೇರ್ ಗಳ ಮೂಲಕ ಟಾರ್ಗೆಟ್ ಮಾಡಿದ್ದಾರೆ. ಅ.12 ರಂದು ಮುಂಬೈ ನಲ್ಲಿ ಉಂಟಾದ ಗ್ರಿಡ್ ವೈಫಲ್ಯ ಇದರ ಪರಿಣಾಮವೇ ಇರಬೇಕೆಂದು ವಿಶ್ಲೇಷಿಸಲಾಗುತ್ತಿದೆ.
ಸೈಬರ್ ಭದ್ರತಾ ಸಂಸ್ಥೆಯ ವರದಿಯ ಪ್ರಕಾರ ಮೇ ತಿಂಗಳ ನಂತರದಲ್ಲಿ ಭಾರತದ ರಕ್ಷಣಾ, ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಾಲ್ವೇರ್ ಗಳು ಏರಿಕೆಯಾಗಿರುವುದು ಕಂಡುಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದೆ ಎಂದೂ ಹೇಳಿದೆ.
ಇದಿಷ್ಟೇ ಅಲ್ಲದೇ ಭಾರತದ ಕೋವಿಡ್-19 ಲಸಿಕೆ ತಯಾರಿಕೆ ಸಂಸ್ಥೆಗಳಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳ ಐಟಿ ವ್ಯವಸ್ಥೆಗಳನ್ನೂ ಟಾರ್ಗೆಟ್ ಮಾಡಲಾಗಿತ್ತು. ಐಪಿ ವಿಳಾಸವನ್ನು ಹ್ಯಾಕ್ ಮಾಡಿ, ಅದರ ಮೂಲಕ ಭಾರತೀಯ ಔಷಧೀಯ ಸಂಸ್ಥೆಗಳ ಮೇಲೆ ಸ್ಪರ್ಧಾತ್ಮಕ ಅನುಕೂಲತೆ ಪಡೆಯುವುದು ಹ್ಯಾಕರ್ ಗಳ ಉದ್ದೇಶವಾಗಿತ್ತು, ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ.
ಅಮೆರಿಕದ ವರದಿಯ ಬಗ್ಗೆ ಚೀನಾ ಪ್ರತಿಕ್ರಿಯೆ
ಅಮೆರಿಕದ ಸೈಬರ್ ಭದ್ರತಾ ಸಂಸ್ಥೆ ನೀಡಿರುವ ವರದಿಯ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಈ ವರದಿ ಸಂಪೂರ್ಣ ಬೇಜವಾಬ್ದಾರಿಯುತವಾಗಿದೆ. ಸಾಕಷ್ಟು ಪುರಾವೆಗಳಿಲ್ಲದೇ ಇದ್ದರೂ ಆರೋಪ ಮಾಡುವುದು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ವಾಂಗ್ ವೆನ್ ಬಿನ್ ಹೇಳಿದ್ದಾರೆ.