ವಾಷಿಂಗ್ಟನ್: ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಹೊಸ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸೋಮವಾರ ಹೇಳಿದ್ದಾರೆ.
ಈ ಪ್ರಕರಣಗಳ ಏರಿಕೆ ನಿರಾಸೆ ತಂದಿದೆ. ಆದರೆ, ಆಶ್ಚರ್ಯವಲ್ಲ ಎಂದಿರುವ ಟೆಡ್ರೊಸ್, ಸೋಂಕು ಹರಡದಂತೆ ರೋಗ ಹರಡುವಿಕೆ ವಿರುದ್ಧದ ಕ್ರಮಗಳನ್ನು ಸಡಿಲಗೊಳಿಸದಂತೆ ರಾಷ್ಟ್ರಗಳನ್ನು ಅವರನ್ನು ಒತ್ತಾಯಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದಂತೆ ಅವರು ಸಲಹೆ ನೀಡಿದ್ದಾರೆ.
ಒಂದು ವೇಳೆ ದೇಶಗಳು ಕೇವಲ ಲಸಿಕೆ ಮೇಲೆ ಅವಲಂಬಿಸಿದರೆ ತಪ್ಪು ಮಾಡಿದಂತಾಗುತ್ತದೆ. ಮೂಲಭೂತ ಸಾರ್ವಜನಿಕ ಆರೋಗ್ಯ ಕ್ರಮಗಳು ಸೋಂಕು ನಿರೋಧಕವಾಗಿ ಉಳಿಯಬೇಕು ಎಂದು ಟೆಡ್ರೊಸ್ ಹೇಳಿದ್ದಾರೆ.