ಚಂಡೀಗಢ: ಪಂಜಾಬ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಹೊಸ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು, ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಿದೆ.
ತಿಂಗಳಾಂತ್ಯದವರೆಗೂ ಶಿಕ್ಷಣ ಸಂಸ್ಥೆಗಳು ಬಂದ್ ಆಗಿರಲಿದ್ದು, ಶಾಪಿಂಗ್ ಮಾಲ್ ಮತ್ತು ಸಿನಿಮಾ ಹಾಲ್ ಗಳಲ್ಲಿನ ಜನ ಸಾಮರ್ಥ್ಯವನ್ನು ಕಡಿತಗೊಳಿಸಲಾಗಿದೆ. ಈ ಬಗ್ಗೆ ಶುಕ್ರವಾರ ನಡೆದ ಕೋವಿಡ್ ಟಾಸ್ಕ್ ಪೋರ್ಸ್ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾಹಿತಿ ನೀಡಿದ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಿ.. ಸಾರ್ವಜನಿಕವಾಗಿ ತಿರುಗಾಡುವ ವೇಳೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ.. ಕನಿಷ್ಛ ಮುಂದಿನ 2 ವಾರಗಳ ಕಾಲ ಸಾಧ್ಯವಾದಷ್ಟೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.
ಅಂತೆಯೇ ಮನೆಯ ಯಾವುದೇ ಕಾರ್ಯಕ್ರಮವಿರಲಿ ಗರಿಷ್ಠ 10 ಮಂದಿಗಿಂತ ಹೆಚ್ಚು ಅಹ್ವಾನಿತರಿಗೆ ಅವಕಾಶವಿಲ್ಲ.. ಈ ಬಗ್ಗೆ ಗಮನ ಹರಿಸಿ.. ಇದರಿಂದ ಸೋಂಕು ಪ್ರಸರಣ ತಪ್ಪುತ್ತದೆ.. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ಮಾರ್ಚ್ 31ರವರೆಗೂ ಮುಚ್ಚಲಾಗಿದ್ದು, ಸಿನಿಮಾ ಹಾಲ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಮಾಲ್ ಮತ್ತು ಇತರೆ ಶಾಪಿಂಗ್ ಕಟ್ಟಡಗಳಲ್ಲಿ ಏಕಕಾಲಕ್ಕೆ ಗರಿಷ್ಡ 100 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪಂಜಾಬ್ ನ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಹೆಚ್ಚೆಚ್ಚು ಸಾರ್ವಜನಿಕರ ಗುಂಪು ಸೇರುವಿಕೆ ನಿಷೇಧಗೊಳಿಸಲಾಗಿದ್ದು, ಅಂತ್ಯಕ್ರಿಯೆ, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಗರಿಷ್ಠ 20 ಮಂದಿಗೆ ಅವಕಾಶ ನೀಡಲಾಗಿದೆ.
ಪ್ರತೀ ಭಾನುವಾರ ಈ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದ್ದು. ರಾತ್ರಿ 9 ರಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಸಿನಿಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ರೆಸ್ಟೋರೆಂಟ್ ಗಳು, ಮಾಲ್ ಗಳ ಕೂಡ ಬಂದ್ ಇರಲಿವೆ ಎಂದು ಸಿಎಂ ಆದೇಶ ಹೊರಡಿಸಿದ್ದಾರೆ. ಕಾರ್ಖಾನೆಗಳು, ಅತ್ಯಾವಸರ ವಸ್ತುಗಳ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಉಳಿದೆಲ್ಲ ಸೇವೆಗಳು ಕಡ್ಡಾಯವಾಗಿ ಮತ್ತು ಪರಿಣಾಮಕಾರಿಯಾಗಿ ಬಂದ್ ಆಗಲಿವೆ ಎನ್ನಲಾಗಿದೆ. ಅಂತೆಯೇ ಕೋವಿಡ್ 19 ಮಾರಕ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸ್ಮರಣಾರ್ಥ ಮುಂದಿನ 2 ವಾರಗಳ ಕಾಲ ಪ್ರತೀ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 12ಗಂಟೆಯವರೆಗೆ 1 ಗಂಟೆ ಕಾಲ ಮೌನಾಚರಣೆ ಮಾಡಲು ಸೂಚಿಸಲಾಗಿದೆ.
2 ವಾರಗಳ ಬಳಿಕ ತಜ್ಞರೊಂದಿಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.