ನವದೆಹಲಿ: ಕೋವಿಡ್-ಪಾಸಿಟಿವ್ ಪ್ರಕರಣಗಳ ಸ್ಫೋಟದ ನಡುವೆ ಮಹಾರಾಷ್ಟ್ರ ಮತ್ತು ಪಂಜಾಬ್ ಶುಕ್ರವಾರ ರಾಜ್ಯವ್ಯಾಪಿ ನಿರ್ಬಂಧಗಳನ್ನು ಘೋಷಿಸಿವೆ ಮತ್ತು ಮಧ್ಯಪ್ರದೇಶ ಮೂರು ಪ್ರಮುಖ ನಗರಗಳಲ್ಲಿ ನಿರ್ಬಂಧಗಳನ್ನು ವಿಧಿಸಿದೆ. ಕೆಲವು ರಾಜ್ಯಗಳು ವೈರಸ್ ಗಳ ಆನುವಂಶಿಕ ಅನುಕ್ರಮ ಮಾದರಿಗಳನ್ನು ಕಳುಹಿಸದಿರುವ ಬಗ್ಗೆ ಕೇಂದ್ರವು ಕಳವಳ ವ್ಯಕ್ತಪಡಿಸಿದೆ. ಕಳೆದ ಐದು ವಾರಗಳಲ್ಲಿ ದೇಶದಲ್ಲಿ ಕೋವಿಡ್-19 ಕೇಸ್ ಗಳು ಶೇ.100ಕ್ಕಿಂತಲೂ ಹೆಚ್ಚಾಗಿವೆ.
ಶುಕ್ರವಾರ ಒಟ್ಟಾರೇ, 39,726 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.71 ಲಕ್ಷ ದಾಟಿದ್ದು, ಫೆಬ್ರವರಿ 11 ರಿಂದ 103% ಬೆಳವಣಿಗೆಯನ್ನು ದಾಖಲಿಸಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,71,282ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಶೇ. 2.82 ರಷ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 25, 833 ದೈನಂದಿನ ಹೊಸ ಪ್ರಕರಣ ದಾಖಲಾಗಿದ್ದರೆ, ಪಂಜಾಬ್ ನಲ್ಲಿ 2,369 ಮತ್ತು ಕೇರಳದಲ್ಲಿ 1,899 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಒಟ್ಟು 39,726 ಹೊಸ ದೈನಂದಿನ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ, ದೆಹಲಿ, ಗುಜರಾತ್, ಕರ್ನಾಟಕ ಮತ್ತು ಹರಿಯಾಣ ಸೇರಿದಂತೆ ಎಂಟು ರಾಜ್ಯಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವಿಶೇಷವಾಗಿ ದೈನಂದಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ರಾಜ್ಯಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಸಚಿವಾಲಯ ತಿಳಿಸಿದೆ.
ಕೋವಿಡ್-19 ಕಂಟೈನ್ ಮೆಂಟ್ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಪರಿಸ್ಥಿತಿ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಪರಾಮರ್ಶೆ ನಡೆಸುತ್ತಿದ್ದು, ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್-19 ಪ್ರಕರಣದ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲು ಮಹಾರಾಷ್ಟ್ರ, ಕೇರಳ, ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಉನ್ನತ ಮಟ್ಟದ ತಂಡವನ್ನು ಕೇಂದ್ರ ಸರ್ಕಾರ ಈ ಹಿಂದೆ ನಿಯೋಜಿಸಿದ್ದು, ಮುಂದಿನ ಕ್ರಮದ ಬಗ್ಗೆ ವರದಿಯನ್ನು ಕೇಂದ್ರ ತಂಡ ಈ ರಾಜ್ಯಗಳೊಂದಿಗೆ ಹಂಚಿಕೊಳ್ಳಲಿದೆ.
ಶುಕ್ರವಾರದವರೆಗೂ ಸುಮಾರು 4 ಕೋಟಿ ಕೊರೋನಾ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.