ಅಹಮದಾಬಾದ್: ಪದಾರ್ಪಣೆ ಪಂದ್ಯವನ್ನು ಆಡಿದ ಇಶಾನ್ ಕಿಶನ್(ಅಜೇಯ 56) ಹಾಗೂ ನಾಯಕ ವಿರಾಟ್ ಕೊಹ್ಲಿ (ಅಜೇಯ 73) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ ಎರಡನೇ ಟಿ-20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ನಿನ್ನೆ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗೆ 164 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಂ ಇಂಡಿಯಾ 17.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ ಜಯ ಸಾಧಿಸಿತು.
ರಾಹುಲ್ ಜೊತೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕಿಶನ್ 56 ರನ್ ( 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ತನ್ನ ಬ್ಯಾಟಿಂಗ್ ವೈಭವ ತೋರಿಸಿದರು. ಆದರೆ ಇತ್ತ ಕನ್ನಡಿಗ ಕೆಎಲ್ ರಾಹುಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ರಾಹುಲ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗಿಳಿದ ವಿರಾಟ್ ಕೊಹ್ಲಿ 73 ರನ್(49 ಎಸೆತ, 5 ಬೌಡಂರಿ, 3 ಸಿಕ್ಸರ್) ಸಿಡಿಸಿ ತಮ್ಮ ರನ್ ಬರ ತೀರಿಸಿಕೊಂಡರು. ಕಡೆಯವರೆಗೆ ಬ್ಯಾಟ್ ಬೀಸಿದ ಕೊಹ್ಲಿ ಭರ್ಜರಿ ಸಿಕ್ಸರ್ ಮೂಲಕ ಮ್ಯಾಚ್ ಗೆಲ್ಲಿಸಿಕೊಟ್ಟರು. ಕೊಹ್ಲಿಗೆ ಪಂತ್ 26 ರನ್(13 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ 8 ರನ್(8 ಎಸೆತ) ಮಾಡಿ ಉತ್ತಮ ಸಾತ್ ನೀಡಿದರು.