ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳುದ್ದಕ್ಕೂ ಫಾಸ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸಿರುವುದು ವಾರ್ಷಿಕವಾಗಿ ತೈಲ ಬಳಕೆಯಲ್ಲಿ 20,000 ಕೋಟಿ ರೂಪಾಯಿಯಷ್ಟು ಉಳಿತಾಯ ಮಾಡಲು ಸಹಾಯಕವಾಗಲಿದೆ. ಜತೆಗೆ ದೇಶದ ಆದಾಯವನ್ನು ಸುಮಾರು 10,000 ಕೋಟಿ ರೂಪಾಯಿಯಷ್ಟು ವೃದ್ಧಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಫಾಸ್‌ಟ್ಯಾಗ್‌ನ ಕಡ್ಡಾಯ ಬಳಕೆ ಬಳಿಕ ಅದರ ಅಡಚಣೆಯನ್ನು ಕಡಿಮೆ ಮಾಡಲು ಮತ್ತು ದಕ್ಷತೆಯ ಸುಧಾರಣೆಗೆ ತಕ್ಷಣದ ನಿರ್ವಹಣಾ ಪರಿಹಾರ ಒದಗಿಸುವ ಉದ್ದೇಶದಿಂದ ರಿಯಲ್ ಟೈಮ್ ಆಧಾರದಲ್ಲಿ ಕಾಯುವ ಸಮಯ ಹಾಗೂ ಸಂಚಾರ ಸರದಿಯ ಸಾಲನ್ನು ಅಳತೆ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ನೇರ ನಿಗಾ ವ್ಯವಸ್ಥೆಯನ್ನು ಆರಂಭಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಪ್ರತಿ ಟೋಲ್ ಪ್ಲಾಜಾದಲ್ಲಿ ಪ್ರತಿ ದಿನವೂ ಉಂಟಾಗುವ ಸಂಚಾರ ದಟ್ಟಣೆ ಸೂಚ್ಯಂಕವನ್ನು ಮಾಪನ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿನ ಒಟ್ಟಾರೆ ಸಂಚಾರ ದಟ್ಟಣೆಯನ್ನು ಅರಿಯಲು ನೇರ ನಿಗಾ ವ್ಯವಸ್ಥೆ ನೆರವಾಗಲಿದೆ. ಜತೆಗೆ ಟೋಲ್ ಪ್ಲಾಜಾಗಳಲ್ಲಿ ಮುಖ್ಯ ಅವಧಿಗಳಲ್ಲಿನ ಸಂಚಾರ ದಟ್ಟಣೆಯ ಸ್ಥಿತಿಗತಿ ಬಗ್ಗೆ ಇದು ಮಾಹಿತಿ ನೀಡಲಿದೆ.
'ಒಟ್ಟಾರೆ ಟೋಲ್ ಪ್ಲಾಜಾಗಳಲ್ಲಿ ಶೇ 80ರಷ್ಟು ಶೂನ್ಯ ಕಾಯುವ ಸಮಯವಿದೆ. ಫಾಸ್‌ಟ್ಯಾಗ್ ಕಡ್ಡಾಯವಾದ ಬಳಿಕ ಕಳೆದ 14 ದಿನಗಳಲ್ಲಿ ವಿದ್ಯುನ್ಮಾನ ಟೋಲಿಂಗ್ ಮೂಲಕ ಟೋಲ್ ಸಂಗ್ರಹವು ಶೇ 80ರಿಂದ ಶೇ 93ಕ್ಕೆ ಹೆಚ್ಚಳವಾಗಿದೆ' ಎಂದು ಗಡ್ಕರಿ ತಿಳಿಸಿದೆ.