ನವದೆಹಲಿ : ಏಷ್ಯಾದಲ್ಲಿ 2022ರ ಅಂತ್ಯದ ವೇಳೆಗೆ 1 ಬಿಲಿಯನ್ ಕೊರೊನಾ ವೈರಸ್ ಲಸಿಕೆಗಳ ಉತ್ಪಾದನೆ ಮತ್ತು ವಿತರಣೆ ಸಾಮರ್ಥ್ಯಕ್ಕಾಗಿ ಹಣಕಾಸಿನ ನೆರವು ಒದಗಿಸಲು ಭಾರತ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಜಪಾನ್ ದೇಶದ ನಾಯಕರು ಒಪ್ಪಿಕೊಂಡಿದ್ದಾರೆ.
ಈ ನಾಲ್ಕು ದೇಶದಗಳ 'ಕ್ವಾಡ್' ಗುಂಪಿನ ಮೊದಲ ಆನ್‌ಲೈನ್ ಸಮ್ಮೇಳನದಲ್ಲಿ ಜಾಗತಿಕ ಲಸಿಕೆ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಆಗ್ನೇಯ ಏಷ್ಯಾ ಹಾಗೂ ಜಗತ್ತಿನಾದ್ಯಂತ ವೃದ್ಧಿಸುತ್ತಿರುವ ಚೀನಾದ ಲಸಿಕೆ ರಾಜತಾಂತ್ರಿಕತೆಯನ್ನು ಎದುರಿಸಲು ಮಹತ್ವದ ಚರ್ಚೆ ನಡೆಯಿತು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕೋವಿಡ್ ಲಸಿಕೆಗಳ ಉತ್ಪಾದನೆ ಮತ್ತು ವಿತರಣೆಯನ್ನು ಚುರುಕುಗೊಳಿಸಲು ಅಗತ್ಯ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಣಕಾಸಿನ ಸಂಪನ್ಮೂಲವನ್ನು ಒದಗಿಸಲು ಈ ನಾಲ್ಕೂ ದೇಶಗಳು ಒಪ್ಪಿಕೊಂಡಿವೆ.ಇದು ಸಾಂಕ್ರಾಮಿಕದ ನಂತರದ ಸನ್ನಿವೇಶವನ್ನು ಸುಧಾರಿಸಲು ಹಾಗೂ ಆ ಸ್ಥಿತಿಯನ್ನು ಸಂಪೂರ್ಣ ನಿವಾರಿಸಲು ನೆರವಾಗಲಿದೆ ಎಂಬ ನಂಬಿಕೆ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.
ಇದೇ ವೇಳೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಚೀನಾದ ಬೆದರಿಕೆಗಳನ್ನು ಎದುರಿಸಲು ನಾಲ್ಕು ದೇಶಗಳು ಸೂಕ್ತ ಯೋಜನೆ ರೂಪಿಸುವ ಸಂಬಂಧ ಚರ್ಚೆ ನಡೆಯಿತು. ಎಲ್‌ಎಸಿಯಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಹಂಚಿಕೊಂಡರು.
ಇಂಡೋ ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ಬೆದರಿಕೆಗಳನ್ನು ಎದುರಿಸಲು ಮುಕ್ತ, ಸ್ವತಂತ್ರ ಮಾದರಿ ವ್ಯವಸ್ಥೆ, ಭದ್ರತೆಗಾಗಿ ಅಂತಾರಾಷ್ಟ್ರೀಯ ಕಾನೂನಿನ ಅಳವಡಿಕೆಯಂತಹ ವಿಚಾರಗಳನ್ನು ಪ್ರಬಲವಾಗಿ ಮಂಡಿಸಲು ನಿರ್ಧರಿಸಲಾಯಿತು.
ಮತ್ತಷ್ಟು ಪರಿಣಾಮಕಾರಿ ಚರ್ಚೆಗಾಗಿ ಈ ನಾಲ್ಕೂ ದೇಶಗಳ ನಾಯಕರು ಈ ವರ್ಷದ ಅಂತ್ಯದಲ್ಲಿ ಖುದ್ದು ಭೇಟಿ ನಡೆಸುವುದಾಗಿ ತೀರ್ಮಾನಿಸಲಾಯಿತು. ಜೂನ್‌ನಲ್ಲಿ ಬ್ರಿಟನ್‌ನಲ್ಲಿ ನಡೆಯುವ ಜಿ-7 ದೇಶಗಳ ಬಹುರಾಷ್ಟ್ರೀಯ ಸಮ್ಮೇಳನ ಅಥವಾ ಅಕ್ಟೋಬರ್‌ನಲ್ಲಿ ನಡೆಯುವ ಜಿ-20 ಸಮ್ಮೇಳನದ ಸಂದರ್ಭದಲ್ಲಿ ಈ ಭೇಟಿ ನಡೆಯುವ ಸಾಧ್ಯತೆ ಇದೆ.