ನವದೆಹಲಿ: 2020ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ರಾಜಕಾರಣಿ-ಬರಹಗಾರ ವೀರಪ್ಪ ಮೊಯ್ಲಿ, ಕವಿ ಅರುಂಧತಿ ಸುಬ್ರಮಣಿಯನ್ ಸೇರಿದಂತೆ 20 ಬರಹಗಾರರು 2020ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರ ಕನ್ನಡದ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ವಿವಿಧ ಭಾಷೆಗಳ ಏಳು ಕವನ ಪುಸ್ತಕಗಳು, ನಾಲ್ಕು ಕಾದಂಬರಿಗಳು, ಐದು ಸಣ್ಣ ಕಥೆಗಳು, ಎರಡು ನಾಟಕಗಳು, ಒಂದು ಆತ್ಮಚರಿತ್ರೆ ಮತ್ತು ಒಂದು ಮಹಾಕಾವ್ಯಕ್ಕೆ ಪ್ರಶಸ್ತಿ ಸಿಕ್ಕಿದೆ.
ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಲ ಸಾಹಿತ್ಯ ಪುರಸ್ಕಾರ ವಿಭಾಗದಲ್ಲಿ ಮಕ್ಕಳ ಸಾಹಿತಿ ಎಚ್.ಎಸ್. ಬ್ಯಾಕೋಡ ಅವರ 'ನಾನೂ ಅಂಬೇಡ್ಕರ್' ಕಾದಂಬರಿಯು ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರೆ, ಕೆ.ಎಸ್. ಮಹದೇವಸ್ವಾಮಿ ಅವರ 'ಧೂಪದ ಮಕ್ಕಳು' ಸಣ್ಣ ಕಥೆಗಳ ಸಂಕಲನ ಯುವ ಪುರಸ್ಕಾರದ ಗೌರವಕ್ಕೆ ಪಾತ್ರವಾಗಿದೆ. ಉರ್ದು ಭಾಷೆಯ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಫೀಸ್ ಕರ್ನಾಟಕ ಅವರ 'ಫಕ್ರ್-ಇ-ವತನ್' ಎಂಬ ಉರ್ದು ಭಾಷೆಯ ಸಣ್ಣ ಕಥೆಗಳ ಸಂಕಲನ ಕೂಡ ಬಾಲ ಪುರಸ್ಕಾರಕ್ಕೆ ಅಯ್ಕೆಯಾಗಿರುವುದು ವಿಶೇಷ. ಶಿವಮೊಗ್ಗದ ಶಿಕಾರಿಪುರ ಮೂಲದ ಹಫೀಸ್ ಕರ್ನಾಟಕ ಅವರ ನಿಜ ಹೆಸರು ಅಮ್ಜದ್ ಹುಸೇನ್.
ರಾಜ್ಯದ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಯು.ಆರ್. ಅನಂತಮೂರ್ತಿ ಅವರ ಕುರಿತು ಲೇಖಕ ಅಂಕಿತ್ ನರ್ವಾಲ್ ಅವರು ಹಿಂದಿ ಭಾಷೆಯಲ್ಲಿ ರಚಿಸಿದ 'ಯು.ಆರ್. ಅನಂತಮೂರ್ತಿ ಪ್ರತಿರೋಧ್ ಕಾ ವಿಕಲ್ಪ್' ಎಂಬ ವಿಮರ್ಶಾ ಕೃತಿಯು ಯುವ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ವಿಶೇಷ.
ನವದೆಹಲಿಯಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವಾರ್ಷಿಕ ಪ್ರಶಸ್ತಿಯು ರೂ. 1 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದ್ದು, ಬಾಲ ಸಾಹಿತ್ಯ ಮತ್ತು ಯುವ ಪುರಸ್ಕಾರಗಳು ತಲಾ 50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.
ಸಾಹಿತಿ ಡಾ.ಎಸ್.ಜಿ. ಸಿದ್ದರಾಮಯ್ಯ, ಡಾ.ಪದ್ಮಾ ಪ್ರಸಾದ್, ಅರವಿಂದ ಮಾಲಗತ್ತಿ, ಬೇಲೂರು ರಘುನಂದನ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಟಿ.ಪಿ. ಅಶೋಕ್, ಎಚ್.ಎಲ್. ಪುಷ್ಪಾ, ಕುಂ. ವೀರಭದ್ರಪ್ಪ, ಎಚ್.ಎಸ್. ವೆಂಕಟೇಶಮೂರ್ತಿ ಅವರಿದ್ದ ವಿವಿಧ ಆಯ್ಕೆ ಸಮಿತಿಗಳು ಕನ್ನಡ ವಿಭಾಗದ ಕೃತಿಗಳನ್ನು ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದವು ಎಂದು ಅಕಾಡೆಮಿ ಮಾಹಿತಿ ನೀಡಿದೆ.