ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರ ಗಡಣ ಬಿಜೆಪಿ ಪರ ಪ್ರಚಾರ ನಡೆಸಲು ಕೇರಳದತ್ತ ಬರುವ ಸೂಚನೆಗಳಿವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಟಾರ್ ಪ್ರಚಾರಕರಾದ ಖುಷ್ಬೂ ಮತ್ತು ವಿಜಯಶಾಂತಿ ಕೂಡ ಪ್ರಚಾರ ಅಭಿಯಾನಕ್ಕಾಗಿ ಕೇರಳಕ್ಕೆ ಬರಲಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪೆÇ್ಲೀಬ್ ಕುಮಾರ್ ದೇವ್ ಅವರು ಮಂಗಳವಾರ ತಿರುವನಂತಪುರಕ್ಕೆ ಆಗಮಿಸಿದ್ದಾರೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಅಮಿತ್ ಷಾ ಅವರ ಐದು ದಿನಗಳ ಅಭಿಯಾನದಲ್ಲಿ ಮೂರು ದಿನ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಮೋದಿ ಐದು ಮಹಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುವರು. ಅಮಿತ್ ಶಾ ಹತ್ತು ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೇರಳದಲ್ಲಿ ನಾಲ್ಕು ದಿನಗಳ ಮತ್ತು ತಮಿಳುನಾಡಿನಲ್ಲಿ ಮೂರು ದಿನಗಳ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಅವರು ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ. ಕಾಂಗ್ರೆಸ್ ಮಾಜಿ ಮುಖಂಡ, ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ರಾಮ್ ಮಾಧವ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇರಳದ ಪ್ರಚಾರ ಅಭಿಯಾನಕ್ಕೆ ಆಗಮಿಸುವರು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಮುಖ್ತಾರ್ ಅಬ್ಬಾಸ್ ನಖ್ವಿ, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಧಮೇರ್ಂದ್ರ ಪ್ರಧಾನ್, ಅನುರಾಗ್ ಠಾಕೂರ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಎರಡು ದಿನಗಳ ರ್ಯಾಲಿಗಳಲ್ಲಿ ಭಾಗವಹಿಸುವರು.
ಮಾರ್ಚ್ 30 ರಿಂದ ಪ್ರಧಾನಿ ಕೇರಳಕ್ಕೆ ಆಗಮಿಸಲಿದ್ದಾರೆ. ಅಮಿತ್ ಶಾ ಅವರು ಮಾರ್ಚ್ 24, 25 ಮತ್ತು ಏಪ್ರಿಲ್ 3 ರಂದು, ಜೆ.ಪಿ.ನಡ್ಡಾ ಅವರು ಮಾರ್ಚ್ 27, 31 ರಂದು, ಮಾರ್ಚ್ 28 ರಂದು ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತು ಖುಷ್ಬೂ, ಮಾರ್ಚ್ 27 ರಂದು ಯೋಗಿ ಆದಿತ್ಯನಾಥ್, ಮಾರ್ಚ್ 21, 22, 25, 26, 27, 29, 30, 31 ಮತ್ತು ಏಪ್ರಿಲ್ 4 ರಂದು ವಿಜಯಶಾಂತಿ ಪ್ರಚಾರ ನಡೆಸಲಿದ್ದಾರೆ.