ನವದೆಹಲಿ: ಯೂತ್ ಕಾಂಗ್ರೆಸ್ ಮತ್ತು ಎನ್ ಎಸ್ ಯು ಐ ಚುನಾವಣೆ ನಡೆಸಿದ್ದಕ್ಕೆ ಸ್ವಪಕ್ಷೀಯರೇ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಜಿ 23 ಕಾಂಗ್ರೆಸ್ ನಾಯಕರ ಸಭೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಎಸ್ ಯೂನಿವರ್ಸಿಟಿ ಆ
ಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಪ್ರಜಾಪ್ರಭುತ್ವ ಚುನಾವಣೆ ಸಂಪೂರ್ಣವಾಗಿ ನಿರ್ಣಾಯಕ, ಆದರೆ ಈ ಸಂಬಂಧ ವಿರೋಧ ಎದುರಿಸಿದ ಮೊದಲ ನಾಯಕ ನಾನೇ ಆಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯುವ ಸಂಘಟನೆ ಮತ್ತು ವಿದ್ಯಾರ್ಥಿ ಸಂಘಟನೆಯಲ್ಲಿ ಚುನಾವಣೆಯನ್ನು ನಡೆಸಿದ ವ್ಯಕ್ತಿ ನಾನು, ಅದಕ್ಕಾಗಿ ನನ್ನ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದವು. ಚುನಾವಣೆಗಳನ್ನುನಡೆಸಿದ್ದಕ್ಕಾಗಿ ನಾನು ಅಕ್ಷರಶಃ ಶಿಲುಬೆಗೇರಿಸಲ್ಪಟ್ಟ ಪರಿಸ್ಥಿತಿಯಲ್ಲಿದ್ದೇನೆ, ನನ್ನ ಸ್ವಂತ ಪಕ್ಷದ ಜನರೇ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪಕ್ಷದೊಳಗಿನ ಪ್ರಜಾಪ್ರಭುತ್ವ ಚುನಾವಣೆ ಸಂಪೂರ್ಣವಾಗಿ ವಿಮರ್ಶಾತ್ಮಕವಾಗಿದೆ, ಈ ಪ್ರಶ್ನೆಯನ್ನು ಬೇರೆ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಕೇಳಲಾಗುವುದಿಲ್ಲ ಎಂಬುದು ನನಗೆ ಕುತೂಹಲ ಹುಟ್ಟಿಸಿದೆ ಎಂದು ರಾಹುಲ್ ಹೇಳಿದ್ದಾರೆ.
ನಮ್ಮ ಪಕ್ಷದ ಆಂತರಿಕ ಚುನಾವಣೆ ಬಗ್ಗೆ ಪ್ರಶ್ನಿಸುವವರು ಬೇರೆ ಪಕ್ಷಗಳನ್ನು ಏಕೆ ಪ್ರಶ್ನಿಸುವುದಿಲ್ಲ, ಬಿಜೆಪಿ, ಬಿಎಸ್ ಪಿ ಹಾಗೂ ಸಮಾಜವಾದಿ ಪಕ್ಷಗಳಲ್ಲಿಆಂತರಿಕ ಪ್ರಜಾಪ್ರಭುತ್ವ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ಸಿದ್ಧಾಂತವು ಸಂವಿಧಾನದ ಸಿದ್ಧಾಂತವಾಗಿದೆ, ಆದ್ದರಿಂದ ಪಕ್ಷವು ಪ್ರಜಾಪ್ರಭುತ್ವವಾಗಿರುವುದು ಹೆಚ್ಚು ಮುಖ್ಯ ಎಂದು ರಾಹುಲ್ ತಿಳಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕರು ಕಾಶ್ಮೀರದಲ್ಲಿ ನಡೆಸಿದ ಜಿ23 ಸಭೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಹಲವು ಕಾಂಗ್ರೆಸ್ ಹಿರಿಯ ಮುಖಂಡರು ರಾಪಕ್ಷದ ಕಾರ್ಯವೈಖರಿ ಪ್ರಶ್ನಿಸಿ, ಅದಕ್ಕೆ ಸುಧಾರಣೆ ತರುವಂತೆ ಕಾಂಗ್ರೆಸ್ ಮದ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು.
ಕಪಿಲ್ ಸಿಬಲ್ ಮತ್ತು ಆನಂದ್ ಶರ್ಮಾ ಸೇರಿದಂತೆ ಭಿನ್ನಮತೀಯ ನಾಯಕರು ಕಾಂಗ್ರೆಸ್ ಪಕ್ಷವು "ದುರ್ಬಲಗೊಳ್ಳುತ್ತಿದ್ದು ಪಕ್ಷದ ಸುಧಾರಣೆಗಾಗಿ ಧ್ವನಿ ಎತ್ತಿದ್ದರು.
ಬಿಜೆಪಿಯ ದುರಹಂಕಾರದ ವಿರುದ್ಧ ಹೋರಾಡಲು ಪಕ್ಷ ಬದಲಾಗಬೇಕು ಮತ್ತು ವಿಧೇಯವಾಗಬೇಕು, 2014 ರ ನಂತರ ಪ್ರತಿಪಕ್ಷಗಳು ಭಾರತಕ್ಕಾಗಿ ಹೋರಾಡುತ್ತಿವೆ ಹೊರತು ಅಧಿಕಾರ ಪಡೆಯಲು ಅಲ್ಲ ಎಂದು ಅವರು ಹೇಳಿದ್ದಾರೆ.