ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಮತ್ತೆ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 26,291 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 118 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 2,19,262 ಆಗಿದೆ.
ಕಳೆದ 24 ಗಂಟೆಗಳಲ್ಲಿ ದಾಖಲಾದ ಕೋವಿಡ್-19 ಪೀಡಿತರ ಸಂಖ್ಯೆ ಕಳೆದ 85 ದಿನಗಳಲ್ಲಿಯೇ ಅತ್ಯಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನಿನ್ನೆ 118 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 1,58,725ಕ್ಕೆ ಏರಿಕೆಯಾಗಿದೆ. ಜೊತೆಗೆ ಒಟ್ಟು ಸೋಂಕಿತರ ಸಂಖ್ಯೆ 1,13,85,339ಕ್ಕೆ ತಲುಪಿದ್ದು, 1,10.07,352 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಸತತ ಐದು ದಿನಗಳಿಂದ ಮೇಲ್ಮುಖವಾಗಿ ಕೋವಿಡ್ ಪ್ರಕರಣಗಳು ಸಾಗುತ್ತಿದ್ದು, ದೇಶದ ಒಟ್ಟು ಸೋಂಕಿತರು ಶೇಕಡಾ 1.93 ರಷ್ಟಿದ್ದರೆ, ಚೇತರಿಕೆಯ ಪ್ರಮಾಣವು ಶೇಕಡಾ 96.68 ಕ್ಕೆ ಇಳಿದಿದೆ ಎಂದು ಅಂಕಿಅಂಶ ತಿಳಿಸಿದೆ.
ದೇಶದಲ್ಲಿ ಈವರೆಗೆ ಒಟ್ಟು 1,58,725 ಸಾವುಗಳು ಸಂಭವಿಸಿವೆ, ಇದರಲ್ಲಿ ಮಹಾರಾಷ್ಟ್ರದಿಂದ 52,861, ತಮಿಳುನಾಡಿನಿಂದ 12,547, ಕರ್ನಾಟಕದಿಂದ 12,390, ದೆಹಲಿಯಿಂದ 10,941, ಪಶ್ಚಿಮ ಬಂಗಾಳದಿಂದ 10,292, ಉತ್ತರಪ್ರದೇಶದಿಂದ 8,746 ಮತ್ತು ಆಂಧ್ರಪ್ರದೇಶದಿಂದ 7,184 ಸಾವುಗಳು ಸಂಭವಿಸಿವೆ.
ಭಾರತದಲ್ಲಿ ಒಂದೇ ದಿನ 7,03,772 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 22,74,07,413 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕೋವಿಡ್-19 ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 2,99,08,038 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.