ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಮುಂದುವರಿದಿರುವ ರೈತ ಸಂಘಟನೆಗಳ ಹೋರಾಟವು ನಾಲ್ಕು ತಿಂಗಳು ಪೂರೈಸಲಿದ್ದು, ಮಾರ್ಚ್ 26ರಂದು ರೈತ ಸಂಘಟನೆಗಳ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ಇಂಧನ ಬೆಲೆ ಏರಿಕೆ ಮತ್ತು ರೈಲ್ವೆಯ ಖಾಸಗೀಕರಣ ವಿರೋಧಿಸಿ ಮಾರ್ಚ್ 15ರಂದು ನಡೆಸಲು ಉದ್ದೇಶಿಸಲಾಗಿರುವ ಪ್ರತಿಭಟನೆಯಲ್ಲಿ ಕೆಲವು ಕಾರ್ಮಿಕ ಒಕ್ಕೂಟಗಳೂ ಭಾಗಿಯಾಗಲಿವೆ ಎಂದು ರೈತ ಮುಖಂಡ ಬೂಟಾ ಸಿಂಗ್ ಬರ್ಜ್‌ಗಿಲ್ ಬುಧವಾರ ಹೇಳಿದರು.
'ಮಾರ್ಚ್ 26ರಂದು ನಾವು ಸಂಪೂರ್ಣ ಭಾರತ್ ಬಂದ್ ಮಾಡಲಿದ್ದೇವೆ, ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಹೋರಾಟವು ಅದೇ ದಿನ ನಾಲ್ಕು ತಿಂಗಳು ಪೂರೈಸಲಿದೆ. ಶಾಂತಿಯುತವಾಗಿ ನಡೆಯಲಿರುವ ಬಂದ್ ಬೆಳಗ್ಗಿನಿಂದ ಸಂಜೆಯವರೆಗೂ ಇರಲಿದೆ' ಎಂದು ಸಿಂಘು ನಡೆಯಲ್ಲಿ ಬೂಟಾ ಸಿಂಗ್ ತಿಳಿಸಿದರು.
ಮಾರ್ಚ್ 19ರಂದು ರೈತರು 'ಮಂಡಿ ಬಚಾವೋ-ಖೇತಿ ಬಚಾವೋ' ದಿನವಾಗಿ ಆಚರಿಸಲಿದ್ದಾರೆ ಎಂದರು.
ರೈತರ ಒಕ್ಕೂಟಗಳು ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖದೇವ್ ಅವರ ನೆನಪಿನಲ್ಲಿ 'ಹುತಾತ್ಮರ ದಿನವಾಗಿ' (ಶಹೀದ್ ದಿವಸ್) ಆಚರಿಸಲು ನಿರ್ಧರಿಸಿವೆ. ಹಾಗೇ ಮಾರ್ಚ್ 28ರಂದು 'ಹೋಲಿಕಾ ದಹನ್' ಆಚರಣೆಯ ಸಂದರ್ಭದಲ್ಲಿ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಡಲಿದ್ದೇವೆ ಎಂದು ರೈತ ಮುಖಂಡರು ಹೇಳಿದರು.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಸಾವಿರಾರು ರೈತರು ಸಿಂಘು, ಟಿಕ್ರಿ ಹಾಗೂ ಗಾಜಿಪುರ ಸೇರಿದಂತೆ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಸುಮಾರು ಮೂರೂವರೆ ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದು ಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನಾತ್ಮಕ ಖಾತರಿ ನೀಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.