ಜಮ್ಮು: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಗುಹೆ ದೇಗುಲಕ್ಕೆ ವಾರ್ಷಿಕ ಅಮರನಾಥ ಯಾತ್ರೆ ಜೂನ್ 28 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 1 ರಿಂದ ನೋಂದಣಿ ಆರಂಭವಾಗಲಿದೆ.
ನಿನ್ನೆ ಜಮ್ಮು ರಾಜಭವನದಲ್ಲಿ ನಡೆದ ಅಮರನಾಥ ದೇಗುಲ ಮಂಡಳಿಯ(ಎಸ್‌ಎಎಸ್‌ಬಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷರೂ ಆದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಹಿಸಿದ್ದರು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್ ಸುಬ್ರಹ್ಮಣ್ಯಂ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಯಾತ್ರಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಮಂಡಳಿ 56 ದಿನಗಳ ಯಾತ್ರೆಯನ್ನು 2021 ರ ಜೂನ್ 28 ರಂದು ಆಶಾಢ ಶುಭ ದಿನದಂದು ಆರಂಭಿಸಲು ನಿರ್ಧರಿಸಿದೆ. ಆಗಷ್ಟ್ 22ರಂದು ಶ್ರಾವಣ ಪೂರ್ಣಿಮ(ರಕ್ಷಾ ಬಂಧನ್)ದಿನದಂದು ಯಾತ್ರೆ ಕೊನೆಗೊಳ್ಳುತ್ತದೆ.
ಕೋವಿಡ್ ಮಾರ್ಗಸೂಚಿಗಳಂತೆ ಈ ವರ್ಷದ ಯಾತ್ರೆ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಯಸ್ ಬ್ಯಾಂಕ್‌ನ ನಿಗದಿಪಡಿಸಿದ 446 ಶಾಖೆಗಳ ಮೂಲಕ ಏಪ್ರಿಲ್ 1 ರಿಂದ ಯಾತ್ರಿಕರ ಮುಂಗಡ ನೋಂದಣಿ ಆರಂಭವಾಗಲಿದೆ.