ಮುಂಬೈ: ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ 'ನಿಗೂಢ ಏಕಶಿಲೆ' ಇದೀಗ ಭಾರತದಲ್ಲೂ ಎರಡನೇ ಬಾರಿಗೆ ಕಾಣಿಸಿಕೊಂಡಿದೆ. ಈ ಮೊದಲು ಗುಜರಾತಿನ ಅಹಮದಾಬಾದ್ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿದ್ದ ನಿಗೂಢ ಏಕಶಿಲೆ ಇದೀಗ ಮಹಾರಾಷ್ಟ್ರದ ಮುಂಬೈ ನಗರದ ಪಾರ್ಕ್ವೊಂದರಲ್ಲಿ ಕಾಣಿಸಿಕೊಂಡಿದೆ.
ಮುಂಬೈನ ಉಪನಗರ ಬಾಂದ್ರಾದ ಜಾಗ್ಗರ್ಸ್ ಪಾರ್ಕ್ನಲ್ಲಿ ನಿಗೂಢ ಏಕಶಿಲೆ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಆಸಿಫ್ ಝಕೆರಿಯಾ ಇಂದು ಬೆಳಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಏಕಶಿಲೆಯ ಬದಿಯಲ್ಲಿ ಸಂಖ್ಯೆಗಳಿವೆ. ಅದರ ಅರ್ಥ ಏನೆಂದು ತಿಳಿಯುವ ಪ್ರಯತ್ನ ಮಾಡಿ ಎಂದು ಎಂದು ಕೆಲವು ಚಿತ್ರಗಳನ್ನು ಆಸಿಫ್ ಪೋಸ್ಟ್ ಮಡಿದ್ದಾರೆ.
ಈಗ ಪತ್ತೆಯಾಗಿರುವ ಏಕಶಿಲೆ ಭಾರತದಲ್ಲಿ ಕಂಡುಬಂದ ಎರಡನೇ ಏಕಶಿಲೆಯಾಗಿದೆ. ಈ ಮೊದಲು ಅಹಮದಾಬಾದ್ನ ಥಲ್ತೇಜ ಏರಿಯಾದಲ್ಲಿರುವ ಸಿಂಫೋನಿ ಪಾರ್ಕ್ನಲ್ಲಿ ಕಂಡುಬಂದಿತ್ತು.
ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಮೈನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿವೆ. ಇದೀಗ ನಿಗೂಢವಾಗಿ ಪತ್ತೆಯಾಗಿರುವ ಏಕಶಿಲೆಯ ಮೂಲವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಏಕಶಿಲೆ ಇದೀಹ ಬಹುಚರ್ಚಿತ ವಿಷಯವಾಗಿದ್ದು, ಸೆಲ್ಫಿ ಮತ್ತು ಫೋಟೋ ಕೇಂದ್ರವಾಗಿದೆ.
ಇದೇ ರೀತಿಯ ನಿಗೂಢ ಏಕಶಿಲೆ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ನಗರಗಳಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಅಮೆರಿಕದ ಉತಾಹ್ ಮರೂಭೂಮಿಯಲ್ಲಿ ಪತ್ತೆಯಾಗಿತ್ತು. ರೋಮಾನಿಯಾ, ಫ್ರಾನ್ಸ್, ಪೋಲೆಂಡ್, ಯುಕೆ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ.