ನವದೆಹಲಿ: ಕೇರಳದ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಪಟ್ಟಿಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಮಿಜೋರಾಂ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರನ್ ಅವರು ರಾಜ್ಯದಲ್ಲಿ ಸಕ್ರಿಯ ಚರ್ಚೆಯಲ್ಲಿರುವ ನೇಮಂ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವರು. ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಮಂಜೇಶ್ವರ ಮತ್ತು ಕೊನ್ನಿಯಿಂದ ಕಣಕ್ಕಿಳಿಯುತ್ತಾರೆ. ಮೆಟ್ರೊಮ್ಯಾನ್ ಇ ಶ್ರೀಧರನ್ ಅವರು ಪಾಲಕ್ಕಾಡ್‍ನಿಂದ ಸ್ಪರ್ಧಿಸಲಿದ್ದಾರೆ. ಪಕ್ಷವು ಹೆಚ್ಚಿನ ಭರವಸೆ ಹೊಂದಿರುವ ಮಲಂಪುಳದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಕೃಷ್ಣಕುಮಾರ್ ಅಭ್ಯರ್ಥಿಯಾಗಿದ್ದಾರೆ.
ತ್ರಿಶೂರ್‍ನಲ್ಲಿ ಚಿತ್ರನಟ ಡಾ.ಸುರೇಶ್ ಗೋಪಿ ಮತ್ತು ಕಾಂಜಿರಪಳ್ಳಿಯಲ್ಲಿ ಡಾ.ಅಲ್ಫೋನ್ಸ್ ಕಣ್ಣಂತಾನಂ, ತಿರೂರಲ್ಲಿ ಅಬ್ದುಲ್ ಸಲಾಮ್, ಇರಿಞಲಕುಡದಲ್ಲಿ ಜಾಕೋಬ್ ಥಾಮಸ್, ತಿರುಉವನಂತಪುರ ಸೆಂಟ್ರಲ್ ನಲ್ಲಿ ನಟ ಕೃಷ್ಣಕುಮಾರ್, ಮತ್ತು ಕಾಟ್ಟಾಕಡದಲ್ಲಿ ಪಿ.ಕೆ. ಕೃಷ್ಣದಾಸ್ ಸ್ಪರ್ಧಿಸಲಿದ್ದಾರೆ. ಸಿ.ಕೆ. ಪದ್ಮನಾಭನ್ ಅವರು ಧರ್ಮಡಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಅಭ್ಯರ್ಥಿಯಾಗಿದ್ದಾರೆ.
ಇತಿಹಾಸದಲ್ಲಿ ಮೊದಲು:
ಕೇರಳದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೋರ್ವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 84 ಮತಗಳಿಂದ ಸೋತ ಮಂಜೇಶ್ವರ ಮತ್ತು ಉಪ ಚುನಾವಣೆಗಳಲ್ಲಿ ಉತ್ತಮ ಮುನ್ನಡೆ ಸಾಧಿಸಿದ ಕೊನ್ನಿ ಕ್ಷೇತ್ರಗಳಿಂದ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಚುನಾವಣೆಯನ್ನು ಭಾರೀ ವಿಶ್ವಾಸದಿಂದ ಎದುರಿಸುತ್ತಿದೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಯಲ್ಲಿ ಇದು ಸ್ಪಷ್ಟವಾಗಿತ್ತು. ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷ 115 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.