ಕಾರವಾರ : ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಎಪ್ರಿಲ್ 2 ಮತ್ತು 3 ರಂದು 12ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಆಯೋಜಿಸಲಾಗಿದೆ ಎಂದು ಕೆರೆಮನೆ ಯಕ್ಷಗಾನ ಮೇಳದ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದರು.
ಗುರುವಾರ ಹೊನ್ನಾವರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಾನಂದ ಹೆಗಡೆ ಕಾರ್ಯಕ್ರಮದ ಮಾಹಿತಿ ನೀಡಿದರು. ಈ ಬಾರಿಯ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಗೆ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರು ಭಾಜನರಾಗಿದ್ದು, ಎಪ್ರಿಲ್ 2 ರಂದು ಉದ್ಘಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದರು.
ಎಪ್ರಿಲ್ 2 ರಂದು ಸಂಜೆ 5:30 ಕ್ಕೆ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ, ಉತ್ಥಾನ' ಮಾಸಪತ್ರಿಕೆ ಸಂಪಾದಕ ಕಾಕುಂಜೆ ಕೇಶವ ಭಟ್, ಅವಧಿ' ಸಂಪಾದಕ ಜಿ.ಎನ್. ಮೋಹನ, ಗಂಗಾಧರ ಗೌಡ, ಗಣಪಯ್ಯ ಗೌಡ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದೆ ಪದ್ಮಶ್ರೀ ಡಾ. ಬಿ. ಜಯಶ್ರೀ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2020' ಪ್ರದಾನ ಮಾಡಲಾಗುವುದು. ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್ ಅಭಿನಂದನೆ ಸಲ್ಲಿಸುವರು.
ಯಕ್ಷಗಾನ ಸಂಶೋಧಕ ಡಾ.ಪಾದೇಕಲ್ಲು ವಿಷ್ಣು ಭಟ್, ಕಲಾವಿದ ಮಂಜುನಾಥ ಭಂಡಾರಿ ಕರ್ಕಿ, ಕೃಷ್ಣ ಭಂಡಾರಿ ಗುಣವಂತೆ, ಯಕ್ಷಗಾನ ಸಂಘಟಕ ಸೂರ್ಯನಾರಾಯಣ ಪಂಪಾಜೆ ಅವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ' ಪ್ರದಾನ ನಡೆಯಲಿದೆ.
ಸಂಜೆ 7 ಗಂಟೆಯಿಂದ ಶಿರಸಿಯ ಜ್ಯೋತಿ ಹೆಗಡೆ ಅವರಿಂದ ರುದ್ರವೀಣೆ ವಾದನ ನಡೆಯಲಿದ್ದು, ಬಳಿಕ ನೃತ್ಯನಿಕೇತನ, ಕೊಡವೂರು, ಉಡುಪಿ ಇವರಿಂದ ನಾರಸಿಂಹ' ನೃತ್ಯರೂಪಕ ನಡೆಯಲಿದ್ದು, ವಿದ್ವಾನ್ ಸುಧೀರ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ ಭಾಗವಹಿಸಲಿದ್ದಾರೆ ಎಂದು ಶಿವಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಶ್ರೀಧರ ಹೆಗಡೆ ಕೆರೆಮನೆ ಇದ್ದರು.
ಕಾರ್ಯಕ್ರಮದ ವಿವರ:
ಎಪ್ರಿಲ್ 3 ರಂದು ಬೆಳಿಗ್ಗೆ 10:30 ರಿಂದ ಹಿರಿಯ ಕಲಾ ಸಾಧಕರನ್ನು ನೆನಪಿಸುವ ಅಪೂರ್ವ ಪೂರ್ವಸ್ಮರಣೆ' ಕಾರ್ಯಕ್ರಮ ನಡೆಯಲಿದೆ. ಎಂ.ರಾಜಗೋಪಾಲ ಆಚಾರ್ಯ ಅವರ ಕುರಿತು ಡಾ.ಶ್ರೀಕಾಂತ ಸಿದ್ಧಾಪುರ ಮತ್ತು ಡಾ.ಜೀ.ಶಂ,ಪರಮಶಿವಯ್ಯ ಅವರ ಕುರಿತು ಜಾನಪದ ತಜ್ಞ ಡಾ.ಕುರುವ ಬಸವರಾಜ ಉಪನ್ಯಾಸ ನೀಡುವರು. ಯಕ್ಷಗಾನ ತಜ್ಞ ಗುರುರಾಜ ಮಾರ್ಪಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅಭ್ಯಾಗತರಾಗಿ ಲೇಖಕ ನಾರಾಯಣ ಯಾಜಿ ಸಾಲೇಬೈಲು ಭಾಗವಹಿಸುವರು.
ಅದೇ ದಿನ ಸಂಜೆ ನಾಟ್ಯೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಯಕ್ಷಗಾನ ಭಾಗವತ ಸುಬ್ರಾಯ ಭಾಗವತ ಕಪ್ಪೆಕೆರೆ ಅವರಿಗೆ 'ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ- 2020' ಪ್ರದಾನ ನಡೆಯಲಿದೆ.
ಸಾಹಿತಿ ಎಲ್.ಆರ್.ಭಟ್ಟ ತೆಪ್ಪ, ಸುಮುಖಾನಂದ ಜಲವಳ್ಳಿ, ಯಕ್ಷಗಾನ ಕಲಾವಿದ ದಯಾನಂದ ಬಳೆಗಾರ, ರಾಜೀವ ಶೆಟ್ಟಿ ಹೊಸಂಗಡಿ ಮತ್ತು ಗುಂಡಿಬೈಲು ಸುಬ್ರಾಯ ಭಟ್ಟ (ಮರಣೋತ್ತರ) ಅವರಿಗೆ 'ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ' ನಡೆಯಲಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಯಲ್ಲಾಪುರ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ಜಿ.ಕೆ.ಹೆಗಡೆ ಹರೀಕೆರೆ ಅಭಿನಂದನೆ ಸಲ್ಲಿಸುವರು. ಯಕ್ಷಗಾನ ವಿದ್ವಾಂಸ, ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ಭಟ್ಕಳ ಶಾಸಕ ಸುನೀಲ್ ನಾಯ್ಕ, ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ.ವಿ. ಜಯರಾಜನ್, ರಂಗತಜ್ಞ ಪ್ರೊ.ಜೆ. ಶ್ರೀನಿವಾಸ ಮೂರ್ತಿ, ಸತೀಶ್ ಕಿಣಿ, ತಹಶೀಲ್ದಾರ್ ವಿವೇಕ ಶೇಣ್ವಿ ಪಾಲ್ಗೊಳ್ಳುವರು.
ಸಂಜೆ 7 ಗಂಟೆಯಿಂದ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡ, ಫೋಕ್ ಲ್ಯಾಂಡ್ ಕೇರಳ ಅವರಿಂದ 'ಒಟ್ಟನ್ ತುಳ್ಳಾಲ್' ಮತ್ತು 'ಶೀತಂಕನ್ ತುಳ್ಳಾಲ್' ನೃತ್ಯ ಮತ್ತು ಧರಣಿ ಟಿ. ಕಶ್ಯಪ್ ಮತ್ತು ತಂಡದಿಂದ ಕೂಚಿಪುಡಿ ಹಾಗೂ ಬೆಂಗಳೂರಿನ 'ಅನೇಕ' ತಂಡದಿಂದ 'ಡ್ರಾಗನ್ ಕಂಪನಿ' ನಾಟಕ ನಡೆಯಲಿದೆ.